ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ತುಂಬಿಕೊಂಡಿದ್ದ ಸಾವಿರಾರು ಕ್ರಿಕೆಟ್ ಪ್ರೇಮಿಗಳು… ಒಂದೆಡೆ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮತ್ತೊಂದೆಡೆ ಪಂಜಾಬ್ ಕಿಂಗ್ಸ್ ನಡುವೆ ನಡೆದ ಫೈನಲ್… ಉಸಿರು ಬಿಗಿ ಹಿಡಿದು ನೋಡುತ್ತಿದ್ದ ಕ್ಷಣ. ಬಹುಕಾಲದ ನಿರೀಕ್ಷೆಯ ನಂತರ ಫೈನಲ್ ತಲುಪಿದ ಪಂಜಾಬ್ ಕಿಂಗ್ಸ್ ಕೇವಲ 6 ರನ್ಗಳಿಂದ ಸೋತು ಹೋಗಿ ರನ್ನರ್-ಅಪ್ ಸ್ಥಾನದಲ್ಲಿ ತೃಪ್ತಿಪಟ್ಟಿತು. ಆದರೆ, ಈ ಸೋಲು ಮಾತ್ರ ಪ್ರೀತಿ ಜಿಂಟಾ ಅವರ ಸುತ್ತ ಹಲವು ಹೊಸ ಚರ್ಚೆಗಳಿಗೆ ಕಾರಣವಾಗಿದೆ.
ಕಳೆದ ವರ್ಷಗಳಲ್ಲಿ ಪಂಜಾಬ್ ತಂಡದ ಪ್ರತಿ ಪಂದ್ಯಕ್ಕೂ ಹಾಜರಾಗಿ, ಆಟಗಾರರಿಗೆ ಬೆನ್ನು ತಟ್ಟಿ ಪ್ರೋತ್ಸಾಹ ನೀಡುತ್ತಿದ್ದ ಪ್ರೀತಿ, ಈ ಬಾರಿ ಕ್ಯಾಮೆರಾದಲ್ಲಿ ಕಣ್ಣಿಗೆ ಬಿದ್ದದ್ದು ಅತಿ ಕಡಿಮೆ.
ಪಂಜಾಬ್ ಕಿಂಗ್ಸ್ ಮಾಲೀಕತ್ವದಲ್ಲಿ ಪ್ರೀತಿಯ ಹಂಚಿಕೆ ಎಷ್ಟು?
ಪಂಜಾಬ್ ಕಿಂಗ್ಸ್ ತಂಡದ ಹೆಸರು ಕೇಳಿದಾಗ ಮೊದಲನೇ ಮುಖ ನೆನಪಿಗೆ ಬರೋದು ಪ್ರೀತಿಯದ್ದು. ಆದರೆ ವಾಸ್ತವಾಂಶ ಏನೆಂದರೆ, ಅವರು ಪಂಜಾಬ್ ಕಿಂಗ್ಸ್ನ ಶೇ. 23ರಷ್ಟು ಷೇರುಗಳನ್ನು ಮಾತ್ರ ಹೊಂದಿದ್ದಾರೆ. ಅತ್ಯಧಿಕ ಶೇರ್ ಶೇ. 46ರಷ್ಟು ಮೋಹಿತ್ ಬರ್ಮನ್ ಅವರ ಬಳಿ ಇದೆ. ಇನ್ನು ನೆಸ್ ವಾಡಿಯಾ ಅವರಿಗೂ ಶೇ. 23ರಷ್ಟು ಪಾಲುದಾರಿಕೆ ಇದೆ. ಕರಣ್ ಪಾಲ್ ಎಂಬ ಇನ್ನೊಬ್ಬ ಉದ್ಯಮಿಗೆ ಶೇ. 8ರಷ್ಟು ಷೇರುಗಳಿವೆ.
ಪ್ರೀತಿ ಜಿಂಟಾ ಕೇವಲ ಐಪಿಎಲ್ಗೆ ಸೀಮಿತವಾಗಿಲ್ಲ. ಕೆರಿಬಿಯನ್ ಪ್ರೀಮಿಯರ್ ಲೀಗ್ನ ‘ಸೇಂಟ್ ಲೂಸಿಯಾ ಕಿಂಗ್ಸ್’ ಎಂಬ ತಂಡದಲ್ಲೂ ಅವರು ಪಾಲುದಾರರು. 2024ರಲ್ಲಿ ಈ ತಂಡ ಸಿಪಿಎಲ್ ಟ್ರೋಫಿ ಗೆದ್ದಿತ್ತು.
ತಂಡ ಫೈನಲ್ವರೆಗೆ ಬಂದರೂ, ಪ್ರೀತಿಯ ಅನುಪಸ್ಥಿತಿಯೇ ಈಗ ಹಲವು ಊಹಾಪೋಹಗಳಿಗೆ ಕಾರಣವಾಗಿದೆ. ಅವರು ವೈಯಕ್ತಿಕ ಕಾರಣಗಳಿಂದ ದೂರವಿದ್ದಾರಾ? ಅಥವಾ ಪಾಲುದಾರಿಕೆಯಿಂದ ಹೊರಬರಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಪ್ರಶ್ನೆಗಳು ಚರ್ಚೆಗೆ ಗ್ರಾಸವಾಗಿವೆ.
ಪ್ರೀತಿ ಜಿಂಟಾ ಅವರ ಹಾಜರಾತಿ ಕಡಿಮೆಯಾದದ್ದು, ತಂಡದ ಮೇಲಿನ ಅವರ ಹಿಡಿತವೂ ನಿಧಾನವಾಗಿ ಸಡಿಲವಾಗುತ್ತಿದೆ ಎಂಬ ಸಂಕೇತವೇ? ಮುಂದಿನ ಸೀಸನ್ಗಳಲ್ಲಿ ಪಂಜಾಬ್ ಕಿಂಗ್ಸ್ ಮತ್ತೊಬ್ಬ ಮಾಲೀಕನ ಆಗಮನವಾಗಬಹುದೇ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡೋದು ಈಗ ಕಾಲದ ಹೊಣೆ.