ದಸರಾ ಮೊದಲೇ ವಿಪಕ್ಷ ನಾಯಕನ ಸ್ಥಾನ ಬದಲಾಗುತ್ತೆ? ಹೊಸ ಬಾಂಬ್ ಸಿಡಿಸಿದ ಪ್ರಿಯಾಂಕ್ ಖರ್ಗೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯ ರಾಜಕೀಯದಲ್ಲಿ ಇತ್ತೀಚೆಗೆ ನಾಯಕತ್ವ ಬದಲಾವಣೆಯ ಚರ್ಚೆ ಭಾರೀ ವೇಗ ಪಡೆಯುತ್ತಿದೆ. ಕಾಂಗ್ರೆಸ್‌ನೊಳಗೆ ಮುಖ್ಯಮಂತ್ರಿ ಸ್ಥಾನ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕುರಿತು ಕೂಲಂಕಷ ಚರ್ಚೆಗಳು ನಡೆಯುತ್ತಿದ್ದರೆ, ಬಿಜೆಪಿ ಪಕ್ಷದಲ್ಲೂ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹಾಗೂ ವಿಪಕ್ಷ ನಾಯಕ ಆರ್. ಅಶೋಕ್ ಬದಲಾವಣೆ ಬಗ್ಗೆ ಊಹಾಪೋಹಗಳು ಮುಂದುವರೆದಿವೆ.

ಈ ಸಂದರ್ಭದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ನೀಡಿದ ತೀಕ್ಷಣ ಹೇಳಿಕೆ ಮತ್ತಷ್ಟು ರಾಜಕೀಯ ತಾಪಮಾನ ಹೆಚ್ಚಿಸಿದೆ. “ಕ್ಷೀಪ್ರ ಕ್ರಾಂತಿ ಕಾಂಗ್ರೆಸ್‌ನಲ್ಲಿ ಆಗಲ್ಲ, ಆದರೆ ಬಿಜೆಪಿಯಲ್ಲಿ ಆಗಬಹುದು” ಎಂದು ವ್ಯಂಗ್ಯವಾಡಿದ್ದಾರೆ. ಅವರು ನೀಡಿದ ಈ ಹೇಳಿಕೆ ಬಿಜೆಪಿ ನಾಯಕರು ದೆಹಲಿಗೆ ತೆರಳಿದ ಹಿನ್ನೆಲೆಯಲ್ಲೇ ಬಂದಿದೆ.

ಆರ್. ಅಶೋಕ್ ಜೂನ್ 25 ರಂದು ದಿಢೀರ್ ದೆಹಲಿಗೆ ತೆರಳಿದ ಬಳಿಕ, ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಚರ್ಚೆಗೇ ಸಂಬಂಧಿಸಿದ್ದೆ ಎಂಬ ಊಹೆಗಳು ಉಂಟಾಗಿವೆ. ಅದರ ಬೆನ್ನಲ್ಲೇ ರಾಜ್ಯಾಧ್ಯಕ್ಷ ವಿಜಯೇಂದ್ರ ಕೂಡ ದೆಹಲಿಗೆ ಹೋಗಿದ್ದು, ಪಕ್ಷದ ಆಂತರಿಕ ತಕರಾರುಗಳನ್ನು ಸೂಚಿಸುತ್ತಿದೆ ಎಂದು ಕೆಲವು ರಾಜಕೀಯ ವಲಯಗಳು ಅಭಿಪ್ರಾಯಪಟ್ಟಿವೆ.

ಪ್ರಿಯಾಂಕ್ ಖರ್ಗೆ ಈ ಬೆಳವಣಿಗೆಯ ಬಗ್ಗೆ ಮಾತನಾಡುತ್ತ, “ಅವರು ದೆಹಲಿಗೆ ರಾಜಕೀಯ ರಜೆಯ ಅನುಭವಕ್ಕೆ ಹೋಗಿಲ್ಲ. ಹೈಕಮಾಂಡ್‌ ಜೊತೆ ಗಂಭೀರ ಚರ್ಚೆ ನಡೆಸಲು ಹೋಗಿದ್ದಾರೆ” ಎಂದು ತೀವ್ರ ಟೀಕೆ ಮಾಡಿದರು. ಜೊತೆಗೆ ದಸರಾ ಮೊದಲೇ ವಿಪಕ್ಷ ನಾಯಕ ಸ್ಥಾನ ಬದಲಾಗುತ್ತೆ, ಅದೇ ಕಾರಣಕ್ಕೆ ಅವರು ದೆಹಲಿ ಹೋಗಿದ್ದಾರೆ ಎಂದು ಖರ್ಗೆ ವ್ಯಂಗ್ಯವಾಡಿದ್ದಾರೆ.

ಇದೇ ವೇಳೆ, ಬಿಜೆಪಿಯೊಳಗಿನ ಅಸಮಾಧಾನ ಕೂಡ ಬಹಿರಂಗವಾಗುತ್ತಿದ್ದು, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಹಲವು ನಾಯಕರು ವಿಜಯೇಂದ್ರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಸ್ಥಿತಿಯನ್ನು ನಿಯಂತ್ರಿಸಲು ಬಿಜೆಪಿ ಹೈಕಮಾಂಡ್ ಮುನ್ನೆಚ್ಚರಿಕಾ ಕ್ರಮಕ್ಕೆ ಮುಂದಾಗಿದೆ ಎಂಬ ಮಾತು ಕೇಳಿಬರುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!