ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ನಿವಾಸದ ಮುಂದೆ ನಡೆದ ಬ್ಯಾನರ್ ಗಲಭೆ ಹಾಗೂ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿ ತೀವ್ರಗೊಳಿಸಿದೆ. ಈಗಾಗಲೇ ಘಟನೆಗೆ ಸಂಬಂಧಿಸಿದಂತೆ ಪ್ರಮುಖ ದಾಖಲೆಗಳನ್ನು ಕಲೆಹಾಕಿರುವ ಅಧಿಕಾರಿಗಳು, ಈಗ ಸಾರ್ವಜನಿಕರ ಸಹಕಾರವನ್ನೂ ಕೋರಿದ್ದಾರೆ.
ಗಲಭೆಯ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಸಾರ್ವಜನಿಕರು ತಮ್ಮ ಮೊಬೈಲ್‌ಗಳಲ್ಲಿ ಚಿತ್ರೀಕರಿಸಿದ ವಿಡಿಯೋ ಅಥವಾ ಫೋಟೋಗಳನ್ನು ಹಂಚಿಕೊಳ್ಳುವಂತೆ ಸಿಐಡಿ ತಂಡ ಮನವಿ ಮಾಡಿದೆ. ಘಟನೆಯ ನೈಜತೆಯನ್ನು ಅರಿಯಲು ಮತ್ತು ಆರೋಪಿಗಳನ್ನು ಗುರುತಿಸಲು ಈ ದೃಶ್ಯಾವಳಿಗಳು ಸಹಕಾರಿಯಾಗಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತನಿಖಾ ತಂಡವು ವಿಶೇಷ ವಾಟ್ಸಪ್ ಸಂಖ್ಯೆಯನ್ನು ನೀಡಿದ್ದು, ಸಾರ್ವಜನಿಕರು ತಮ್ಮಲ್ಲಿರುವ ವಿಡಿಯೋ ತುಣುಕುಗಳನ್ನು ಆ ಸಂಖ್ಯೆಗೆ ಕಳುಹಿಸಬಹುದಾಗಿದೆ. ಮಾಹಿತಿ ನೀಡುವವರ ಹೆಸರು ಮತ್ತು ವಿವರಗಳನ್ನು ಸಂಪೂರ್ಣವಾಗಿ ಗೌಪ್ಯವಾಗಿಡಲಾಗುವುದು ಎಂದು ಸಿಐಡಿ ಭರವಸೆ ನೀಡಿದೆ. ಆ ಮೂಲಕ ಯಾವುದೇ ಭಯವಿಲ್ಲದೆ ಸಾರ್ವಜನಿಕರು ತನಿಖೆಗೆ ಸಹಕರಿಸಲು ಅವಕಾಶ ಮಾಡಿಕೊಡಲಾಗಿದೆ.


