ಇವರೇನು ಅಧಿಕಾರದಲ್ಲಿ ಶಾಶ್ವತವಾಗಿ ಇರುತ್ತಾರೆಯೇ?: ರಾಮನಗರ ಹೆಸರು ಬದಲಾವಣೆಗೆ HDK ಕೆಂಡ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಮನಗರ ಹೆಸರನ್ನುಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ತೀವ್ರ ವಾಗ್ದಾಳಿ ನಡೆಸಿದರು.

ಇವರೇನು ಅಧಿಕಾರದಲ್ಲಿ ಶಾಶ್ವತವಾಗಿ ಇರುತ್ತಾರೆಯೇ ? ಮುಂದೆ ಪರಿಸ್ಥಿತಿ ಬದಲಾಗಲಿದೆ. ಆಗ ಇವರು ಇಟ್ಟಿರುವ ಹೆಸರೂ ಬದಲಾಗಲಿದೆ ಎಂದು ಎಚ್ಚರಿಕೆ ನೀಡಿದರು.

ದೆಹಲಿಯ ತಮ್ಮ ಅಧಿಕೃತ ನಿವಾಸದಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು ಅವರು, ಈ ರಾಜ್ಯಕ್ಕೆ ಮೂವರು ಮುಖ್ಯಮಂತ್ರಿಗಳನ್ನು ರಾಮನಗರ ಕೊಟ್ಟಿದೆ. ಇಡೀ ಜಗತ್ತೇ ನಿಬ್ಬೆರಗಾಗುವ ವಿಧಾನಸೌಧವನ್ನು ಕೆಂಗಲ್ ಹನುಮಂತಯ್ಯ ಅವರು ಕಟ್ಟಿಸಿದ್ದರು. ನೆಹರು ಅವರಿಗೆ ಸಡ್ಡು ಹೊಡೆದು ರಾಜಕೀಯ ಮಾಡಿದ್ದರು. ಅಂತಹ ಮಹನೀಯರ ಹೆಸರನ್ನಾದರೂ ಜಿಲ್ಲೆಗೆ ಇಡಬಹುದಿತ್ತು. ಅವರ ಹೆಸರು ಇಟ್ಟಿದ್ದಿದ್ದರೆ ನಾನು ಅಭಿನಂದಿಸುತ್ತಿದ್ದೆ. ಕೆಂಗಲ್ ಅವರ ಹೆಸರಿಟ್ಟರೆ ಇವರ ಭೂಮಿಗಳಿಗೆ ಬೆಲೆ ಬರುವುದಿಲ್ಲವಲ್ಲ? ಎಂದು ಕುಮಾರಸ್ವಾಮಿ ಅವರು ಕಟುವಾಗಿ ಟೀಕಿಸಿದರು.

ರಾಮನಗರ ಹೆಸರನ್ನು ತೆಗೆದುಹಾಕಿ ಬೆಂಗಳೂರು ದಕ್ಷಿಣ ಎಂದು ಹೆಸರು ಇಟ್ಟುಕೊಂಡಿರುವುದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಮ್ಮ ಭೂಮಿಗಳ ಬೆಳೆಯನ್ನು ಏರಿಸುವ ಷಡ್ಯಂತ್ರದ ಭಾಗವಾಗಿದೆ ಎಂದು ಅವರು ಟೀಕಾ ಪ್ರಹಾರ ನಡೆಸಿದರು.

ಅವರು ಏತಕ್ಕಾಗಿ ಜಿಲ್ಲೆಯ ಹೆಸರು ಬದಲಿಸಿದ್ದಾರೆ? ಅದರ ಹಿಂದಿನ ದುರುದ್ದೇಶ ಏನಿದೆ? ಎಂಬುದು ಗೊತ್ತಿದೆ. ಇದರ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಯಾವಾಗ ಅದಕ್ಕೆ ತಿರುಗಿಸಿ ಉತ್ತರ ಕೊಡಬೇಕೋ ಆಗ ಕೊಡುತ್ತೇನೆ ಎಂದು ಕೇಂದ್ರ ಸಚಿವರು ತಿರುಗೇಟು ಕೊಟ್ಟರು.

ಇವರೇನು ಶಾಶ್ವತವಾಗಿ ಅಧಿಕಾರದಲ್ಲಿ ಇರುತ್ತಾರೆಯೇ? ಇವರು ಮಾಡಿದ್ದು ಮುಂದೆ ಬದಲಾಗಲಿದೆ. ಅದೂ ನನಗೆ ಗೊತ್ತಿದೆ. ಹೇಳಿ ಕೇಳಿ ಈ ವ್ಯಕ್ತಿ ರಿಯಲ್ ಎಸ್ಟೇಟ್ ವ್ಯಾಪಾರಿ. ಏನೆಲ್ಲಾ ತಂತ್ರಗಾರಿಕೆ ಹೂಡಿದರೆ ತಮ್ಮ ಜಮೀನುಗಳಿಗೆ ಬೆಲೆ ಬರುತ್ತಿದೆ ಎನ್ನವುದು ಅವರಿಗೆ ಗೊತ್ತಿದೆ. ರಾಮನಗರ ಜಿಲ್ಲೆಯಾದಾಗಲೇ ರೈತರ ಭೂಮಿಗೆ ಬೆಲೆ ಬಂದಿರಲಿಲ್ಲವೇ? ಎಂದು ಕುಮಾರಸ್ವಾಮಿ ಅವರು ಖಾರವಾಗಿ ಪ್ರಶ್ನಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!