ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕನ್ನಡ ಜಿಲ್ಲೆಯ ವಿವಿದೆಡೆ ಇಂದು ಗಾಳಿ ಸಹಿತ ಭಾರೀ ಮಳೆಯಾಗಿದೆ. ಸುಂಟರಗಾಳಿ ಮಾದರಿಯ ಗಾಳಿ ಮಳೆಗೆ ಹಲವೆಡೆಯಲ್ಲಿ ಹಾನಿಯಾಗಿದೆ.
ಜಿಲ್ಲೆಯ ಮoಗಳೂರು, ಬಂಟ್ವಾಳ, ಬೆಳ್ತಂಗಡಿ , ಸುಳ್ಯ ಮೊದಲಾದ ಕಡೆ ವರುಣನ ಆಗಮನವಾಗಿದೆ.
ಬಂಟ್ವಾಳ ತಾಲೂಕಿನ ಮಾಣಿ- ಪುತ್ತೂರು ರಸ್ತೆಯ ನೇರಳಕಟ್ಟೆಯಲ್ಲಿ ತೆಂಗಿನಮರವೊಂದು ರಸ್ತೆಗೆ ಬಿದ್ದು ಸ್ಕೂಟರ್ ಸವಾರನೋರ್ವ ಕೂದಲೆಳೆಯ ಅಂತರದಲ್ಲಿ ಪಾರಾದ ಘಟನೆ ಸಂಭವಿಸಿದೆ.
ಸುಂಟರಗಾಳಿಗೆ ಹಲವು ವಿದ್ಯುತ್ ಕಂಬಗಳು ಧರೆಗುರುಳಿವೆಯಲ್ಲದೆ ವಿವಿಧ ಗ್ರಾಮಗಳಲ್ಲಿ ಮನೆಯ ಛಾವಣಿಯು ಹಾರಿಹೋಗಿದೆ. ಅನೇಕ ಕಡೆಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳಿಗೆ ರಸ್ತೆ ಬದಿ ಹಾಕಲಾದ ಪ್ಲೆಕ್ಸ್ ಗಳು ಧರೆಗುರುಳಿವೆ.
ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ತೆಂಗಿನ ಮರ ಹಾಗೂ ವಿದ್ಯುತ್ ಕಂಬ,ವಿದ್ಯುತ್ ತಂತಿಗಳು ಧರಾಶಾಹಿಯಾಗಿದ್ದು ಮೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಸ್ಥಳೀಯರ ಸಹಕಾರದಿಂದ ತೆರವುಗೊಳಿಸಿ ಸುಗಮ ವಾಹನ ಸಂಚಾರಕ್ಕೆ ಅನುವುಮಾಡಿಕೊಟ್ಟರು.
ಬೆಳ್ತಂಗಡಿಯ ಚಾರ್ಮಾಡಿ, ಮುಂಡಾಜೆ, ಉಜಿರೆ ಮೊದಲಾದ ಕಡೆ ಗಾಳಿಯ ರಭಸಕ್ಕೆ ಮರಗಳು ಉರುಳಿದ್ದು, ಚಾರ್ಮಾಡಿಯ ಪೆಟ್ರೋಲ್ ಪಂಪ್ ಸಮೀಪ ಭಾರೀ ಗಾತ್ರದ ಮರವೊಂದು ಅಸ್ಯಮ್ಮ ಎಂಬವರ ಮನೆ ಮೇಲೆ ಮುರಿದು ಬಿದ್ದು ಮನೆಗೆ ಸಂಪೂರ್ಣ ಹಾನಿ ಸಂಭವಿಸಿದೆ. ಮನೆಯಲ್ಲಿ ಯಾರು ಇಲ್ಲದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಿಬಿದ್ರೆಯ ಬೊಟ್ಟುಮನೆ ರಮಾನಂದ ಎಂಬವರ ಮನೆ ಮೇಲೆ ಮರ ಬಿದ್ದು ಹಾನಿ ಸಂಭವಿಸಿದೆ.
ಕಕ್ಕಿಂಜೆ ಪೇಟೆಯಲ್ಲಿಯೂ ಗಾಳಿಯ ಅಬ್ಬರಕ್ಕೆ ಎರಡು ಅಂಗಡಿಗಳಿಗೆ ಹಾನಿ ಸಂಭವಿಸಿದೆ. ಕನ್ಯಾಡಿ ಗ್ರಾಮದ ಪಾರ್ನಡ್ಕದಲ್ಲಿ ಗಾಳಿಯ ಅಬ್ಬರಕ್ಕೆ ಮನೆಯೊಂದರ ಶೀಟು ಹಾರಿ ಹೋಗಿದೆ.
ಕಲ್ಮಂಜ ಗ್ರಾಮದ ಮೂಲಾರು ಸಮೀಪ ಪುಟ್ಟ ನಾಯ್ಕ ಎಂಬವರ ಕೊಟ್ಟಿಗೆಯ ಶೀಟುಗಳು ಹಾರಿ ಹೋಗಿವೆ. ಮುಂಡಾಜೆ-ಕುಡೆಂಚಿ ರಸ್ತೆಯಲ್ಲಿ ಬೃಹತ್ ಗಾತ್ರದ ಮರ ಉರುಳಿ ವಾಹನ ಸಂಚಾರ ಸ್ಥಗಿತಗೊಂಡಿದೆ.
ವಿದ್ಯುತ್ ಪೂರೈಕೆ ಅಸ್ತವ್ಯಸ್ತ
ಸುಂಟರಗಾಳಿಯ ರಭಸಕ್ಕೆ ಬೆಳ್ತಂಗಡಿ ಮೆಸ್ಕಾಂ ಉಪವಿಭಾಗದ ಅಲ್ಲಲ್ಲಿ 41 ವಿದ್ಯುತ್ ಕಂಬಗಳು,ಉಜಿರೆ ಮೆಸ್ಕಾಂ ಉಪ ವಿಭಾಗದ ನಾನಾ ಭಾಗಗಳಲ್ಲಿ 58 ಕಂಬಗಳು ಮುರಿದುಬಿದ್ದಿರುವ ಬಗ್ಗೆ ಪ್ರಾಥಮಿಕ ಮಾಹಿತಿ ಲಭಿಸಿದೆ.ಇನ್ನಷ್ಟು ಕಡೆ ವಿದ್ಯುತ್ ಕಂಬಗಳು ಮುರಿದುಬಿದ್ದಿರುವ ಸಾಧ್ಯತೆ ಇದೆ. ಈಗಾಗಲೇ ಮಾ. 12ರಂದು ತಾಲೂಕಿನಲ್ಲಿ ಬೀಸಿದ ಬಾರಿ ಗಾಳಿಗೆ 130 ವಿದ್ಯುತ್ ಕಂಬಗಳು ಹಾನಿಗೊಳಗಾಗಿದ್ದವು.
ವಿದ್ಯುತ್ ಕಂಬಗಳು ಮುರಿದುಬಿದ್ದ ಕಾರಣ, ಅಲ್ಲಲ್ಲಿ ವಿದ್ಯುತ್ ತಂತಿಗಳು ತುಂಡಾಗಿರುವುದರಿಂದ ತಾಲೂಕಿನ ವಿದ್ಯುತ್ ಪೂರೈಕೆ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಉರಿ ಬಿಸಿಲಿನ ಮಧ್ಯೆಯು ಸುಂಟರಗಾಳಿ ಮಾದರಿಯ ಹಠಾತ್ ಗಾಳಿ,ಮಳೆ ಜನರನ್ನು ಕಂಗಾಲಾಗಿಸಿತಲ್ಲದೆ ಕೊಂಚ ತಂಪನ್ನುಂಟುಮಾಡಿತು.