ಕೊಡಗು ಜಿಲ್ಲೆಯಲ್ಲಿ ಗಾಳಿ ಮಳೆ: ದುಬಾರೆಗೆ ಪ್ರವಾಸಿಗರಿಗೆ ನೋ ಎಂಟ್ರಿ!

 ಹೊಸದಿಗಂತ ವರದಿ,ಮಡಿಕೇರಿ:

ಕೊಡಗು ಜಿಲ್ಲೆಯಲ್ಲಿ ಗಾಳಿ ಮಳೆ ಹಿನ್ನೆಲೆಯಲ್ಲಿ ದುಬಾರೆ ಸಾಕಾನೆ ಶಿಬಿರಕ್ಕೆ ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ತಾತ್ಕಾಲಿಕವಾಗಿ ಪ್ರವಾಸಿಗರನ್ನು ನಿರ್ಬಂಧಿಸಿ ಮಡಿಕೇರಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಕುಶಾಲನಗರ ವಲಯದ ದುಬಾರೆ ಸಾಕಾನೆ ಶಿಬಿರವು ಅತ್ಯಂತ ಪ್ರಸಿದ್ಧ ಪ್ರವಾಸಿ ತಾಣವಾಗಿದ್ದು, ಪ್ರತೀ ದಿನ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಪ್ರಸ್ತುತ ಕೊಡಗು ಜಿಲ್ಲೆಗೆ ಮುಂಗಾರು ಪ್ರವೇಶಿಸಿದ್ದು, ಪ್ರತೀದಿನ ಮಳೆ ಗಾಳಿ ವಿಪರೀತವಾಗಿರುವುದರಿಂದ ಕೊಡಗು ಜಿಲ್ಲೆಯ ಮುಖ್ಯ ಹೆದ್ದಾರಿಗಳಲ್ಲಿ ರಸ್ತೆಗೆ ಅಡ್ಡಲಾಗಿ ಮರಗಳು ಬೀಳುತ್ತಿದ್ದು, ವಾಹನಗಳ ಓಡಾಟಕ್ಕೆ ಕಷ್ಟಕರವಾಗುತ್ತಿದೆ. ದುಬಾರೆ ಸಾಕಾನೆ ಶಿಬಿರದಲ್ಲಿ ಹರಿಯುತ್ತಿರುವ ಕಾವೇರಿ ನದಿಯ ನೀರಿನ ಮಟ್ಟವೂ ದಿನೇ ದಿನೇ ಹೆಚ್ಚಾಗುತ್ತಿದ್ದು, ಪ್ರವಾಸಿಗರನ್ನು ಸಾಕಾನೆ ಶಿಬಿರಕ್ಕೆ ದೋಣಿ ಮುಖಾಂತರ ನದಿ ದಾಟಿಸುವುದು ಕಷ್ಟಕರ ಹಾಗೂ ಅಪಾಯಕಾರಿಯಾಗಿರುತ್ತದೆ. ಈ ಪರಿಸ್ಥಿತಿಯಲ್ಲಿ ದುಬಾರೆ ಸಾಕಾನೆ ಶಿಬಿರಕ್ಕೆ ಆಗಮಿಸುವ ಪ್ರವಾಸಿಗರಿಗೆ ಹಾಗೂ ಇತರೆ ಸಾರ್ವಜನಿಕರಿಗೆ ತೊಂದರೆ ಉಂಟಾಗುವುದನ್ನು ಮನಗಂಡು ಸದ್ರಿ ಪರಿಸ್ಥಿತಿಯನ್ನು ನಿಯಂತ್ರಿಸಲು ಮುಂಜಾಗ್ರತಾ ಕ್ರಮವಾಗಿ ದುಬಾರೆ ಸಾಕಾನೆ ಶಿಬಿರಕ್ಕೆ ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ತಾತ್ಕಾಲಿಕವಾಗಿ ಪ್ರವಾಸಿಗರನ್ನು ನಿರ್ಬಂಧಿಸಲಾಗಿದೆ ಎಂದು ಅವರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!