ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಗಾಳಿ ಸಹಿತ ಮಳೆಯಾಗುತ್ತಿದೆ. ನಗರದ ಶಾಂತಿನಗರ, ರಿಚ್ಮಂಡ್ ಸರ್ಕಲ್, ಕಾರ್ಪೊರೇಷನ್, ಮೆಜೆಸ್ಟಿಕ್, ಜಯನಗರ, ಕೆ.ಆರ್.ಮಾರ್ಕೆಟ್, ಜೆ.ಪಿ.ನಗರ, ವಿಜಯನಗರ, ರಾಜಾಜಿನಗರ, ಮಹದೇವಪುರ, ಕೆ.ಆರ್.ಪುರಂ, ಟಿನ್ ಫ್ಯಾಕ್ಟರಿ, ಮಾರತಹಳ್ಳಿ ಸೇರಿದಂತೆ ನಗರದ ಹಲವೆಡೆ ಮಳೆ ಗಾಳಿ ಸಹಿತ ಮಳೆಯಾಗಿದೆ.
ಭಾರಿ ಮಳೆಯಿಂದ ನಗರದ ಹಲವು ರಸ್ತೆಗಳಲ್ಲಿ ನೀರು ನಿಂತಿದ್ದು, ವಾಹನ ಸವಾರರು ಪರದಾಡುವಂತಾಯಿತು. ಭಾರಿ ಮಳೆಗೆ ರಸ್ತೆಗಳು ಜಲಾವೃತಗೊಂಡಿದ್ದು, ಕೆರೆಯಂತಗಿವೆ.
ನಗರದ ಹಲವು ರಸ್ತೆಗಳಲ್ಲಿ ಮಳೆ ನೀರು ನಿಂತಿದ್ದು, ವಾಹನ ಸಂಚಾರ ನಿಧಾನಗತಿಯಲ್ಲಿರುತ್ತದೆ ಎಂದು ಬೆಂಗಳೂರು ಸಂಚಾರಿ ಪೊಲೀಸರು ತಿಳಿಸಿದ್ದಾರೆ. ಮಾರತ್ತಹಳ್ಳಿ ಪೊಲೀಸ್ ಠಾಣೆಯಿಂದ ಕಲಾಮಂದಿರ ಕಡೆಗೆ ಹೋಗುವ ರಸ್ತೆಯಲ್ಲಿ ಮಳೆ ನೀರು ನಿಂತಿರುವುದರಿಂದ ನಿಧಾನಗತಿಯ ಸಂಚಾರವಿರುತ್ತದೆ ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ.
ಕಸ್ತೂರಿ ನಗರ ಕಡೆಯಿಂದ ಎಮ್ಎಮ್ಟಿ ಜಂಕ್ಷನ್ (ಕೆ ಆರ್ ಪುರ) ಕಡೆಗೆ ಹೋಗುವ ಮಾರ್ಗದಲ್ಲಿ ಎಂ.ಎಂ.ಟಿ ಬಸ್ ನಿಲ್ದಾಣದ ಹತ್ತಿರ ಮಳೆ ನೀರು ನಿಂತಿರುವುದರಿಂದ ವೈಟ್‌ಫೀಲ್ಡ್, ಮಹದೇವಪುರ ಮತ್ತು ಕೆ ಆರ್ ಪುರ ಕಡೆಗೆ ಹೋಗುವ ವಾಹನಗಳು ನಿಧಾನಗವಾಗಿ ಸಂಚರಿಸಬೇಕೆಂದು ಟ್ರಾಫಿಕ್ ಪೊಲೀಸರು ಮನವಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಇನ್ನೂ 5 ದಿನ ಮಳೆ
ಮುಂದಿನ ಐದು ದಿನಗಳ ಕಾಲ ರಾಜಧಾನಿ ಬೆಂಗಳೂರಿನಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಏಪ್ರಿಲ್ 16 ರಿಂದ ಏಪ್ರಿಲ್ 20ರ ತನಕ ಮಳೆಯಾಗಲಿದೆ.