ಹೊಸದಿಗಂತ ಡಿಜಿಟಲ್ ಡೆಸ್ಕ್:
ನೇಪಾಳ ಇಲ್ಲದೆ ನಮ್ಮ ಭಗವಾನ್ ರಾಮ ಕೂಡ ಪರಿಪೂರ್ಣನಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದರು.
ನೇಪಾಳ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಬುದ್ಧ ಪೂರ್ಣಿಮೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು.
ನೇಪಾಳ ಇಲ್ಲದೆ ನಮ್ಮ ಭಗವಾನ್ ರಾಮ ಕೂಡ ಪರಿಪೂರ್ಣನಲ್ಲ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುತ್ತಿರುವುದಕ್ಕೆ ಇಲ್ಲಿನ(ನೇಪಾಳ) ಪ್ರಜೆಗಳು ಸಂತೋಷ ವ್ಯಕ್ತಪಡಿಸಿದ್ದಾರೆ. ವಿಶ್ವದ ಅನೇಕ ಪವಿತ್ರ ಸ್ಥಳಗಳಲ್ಲಿ ನೇಪಾಳ ಕೂಡ ಒಂದಾಗಿದೆ. ಭಾರತ ಮತ್ತು ನೇಪಾಳದ ಸಂಬಂಧ ಒಂದೇ ಕುಟುಂಬದ ಸದಸ್ಯರ ರೀತಿ ಕೆಲಸ ಮಾಡಲು ದಾರಿ ಮಾಡಿಕೊಟ್ಟಿದೆ ಎಂದು ತಿಳಿಸಿದರು.
ಭಾರತ-ನೇಪಾಳ ಸಂಬಂಧ ಹಿಮಾಲಯದಂತೆ ಗಟ್ಟಿಯಾಗಿದ್ದು, ಯಾವುದೇ ಕಾರಣಕ್ಕೂ ಅದು ಅಲುಗಾಡುವುದಿಲ್ಲ. ನಮ್ಮಿಬ್ಬರ ಸ್ನೇಹ ಯಾವಾಗಲೂ ಮಾನವಕುಲಕ್ಕೆ ಸೇವೆ ಮಾಡುವುದರಲ್ಲಿ ನಿರಂತರವಾಗಿದೆ ಎಂದು ಹೇಳಿದ್ದಾರೆ.
ಭಗವಾನ್ ಬುದ್ಧನ ಜನ್ಮಸ್ಥಳಕ್ಕೆ ಭೇಟಿ ನೀಡಲು ನನಗೆ ಸಂತೋಷವಾಗುತ್ತದೆ. ಇಲ್ಲಿಗೆ ಭೇಟಿ ನೀಡುವುದು ವಿಭಿನ್ನ ಭಾವನೆ ಮೂಡಿಸುತ್ತದೆ. 2014ರಲ್ಲಿ ಈ ಸ್ಥಳಕ್ಕೆ ಭೇಟಿಯಾಗಿ ಉಡುಗೊರೆಯಾಗಿ ನೀಡಿದ್ದ ಮಹಾಬೋಧಿ ಸಸಿ ದೊಡ್ಡದಾಗಿ ಬೆಳೆಯುತ್ತಿರುವುದನ್ನ ನೋಡಿ ನನಗೆ ಸಂತೋಷವಾಯಿತು ಎಂದು ಹೇಳಿದರು.
ನೇಪಾಳ ಪ್ರಧಾನಿ ಶೇರ್ ಬಹದ್ದೂರ್ ಮಾತನಾಡಿ, ಭಗವಾನ್ ಬುದ್ಧನ ಜನ್ಮಸ್ಥಳವಾದ ಲುಂಬಿನಿಗೆ ಪ್ರಧಾನಿ ಮೋದಿಯವರನ್ನ ಸ್ವಾಗತಿಸಲು ಅತ್ಯಂತ ಸಂತೋಷವಾಗುತ್ತಿದೆ. ಶಾಂತಿಧೂತ ಪ್ರಧಾನಿ ಮೋದಿಯವರ ಉಪಸ್ಥಿತಿ ಬುದ್ಧ ಪೂರ್ಣಿಮೆ ದಿನ ಮತ್ತಷ್ಟು ವಿಶೇಷವಾಗಿಸಿದೆ ಎಂದು ಬಣ್ಣಿಸಿದರು.
ಬುದ್ಧ ಪೂರ್ಣಿಮೆ ಕಾರ್ಯಕ್ರಮಕ್ಕೂ ಮೊದಲು ಉಭಯ ದೇಶಗಳ ನಾಯಕರ ಮಧ್ಯೆ ಅನೇಕ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಇದಾದ ಬಳಿಕ ಲುಂಬಿನಿ ಮೊನಾಸ್ಟಿಕ್ ವಲಯದಲ್ಲಿ ದೆಹಲಿಯ ಇಂಟರ್ ನ್ಯಾಷನಲ್ ಬೌದ್ಧ ಒಕ್ಕೂಟದ (ಐಬಿಸಿ) ಪ್ಲಾಟ್‌ನಲ್ಲಿ ಬೌದ್ಧ ಸಂಸ್ಕೃತಿ ಮತ್ತು ಪರಂಪರೆಯ ಕೇಂದ್ರ ನಿರ್ಮಾಣಕ್ಕೆ ಶಂಕುಸ್ಥಾಪನೆ ನಡೆಸಲಾಯಿತು.