ಹೊಸದಿಗಂತ ವರದಿ, ಹಾಸನ :
ನಗರದ ಖಾಸಗಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯ ಹಾಗೂ ಆಸ್ಪತ್ರೆಯ ಆಡಳಿತ ಮಂಡಳಿಯ ಬೇಜವಾಬ್ದಾರಿಯಿಂದ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿ ಕುಟುಂಬಸ್ಥರು ಆಸ್ಪತ್ರೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ, ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.
ನಂದಿನಿ (34) ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಮಹಿಳೆ. ಆಲೂರು ತಾಲ್ಲೂಕಿನ, ವಳಗರಹಳ್ಳಿ ಗ್ರಾಮದವರು. ಹಾಸನ ನಗರದ ಆರ್.ಸಿ.ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಘಟನೆ ನಡೆದಿದ್ದು, ಆಸ್ಪತ್ರೆಯ ಆವರಣದಲ್ಲೇ ಮೃತಳ ಪೋಷಕರು ಕಣ್ಣೀರಿಡುತ್ತ ಪ್ರತಿಭಟನೆ ನಡೆಸಿದರು.
ಘಟನೆ ವಿವರ : ಸಂತಾನಹರಣ ಶಸ್ತ್ರ ಚಿಕಿತ್ಸೆಗೆ ಎಂದು ಮೃತ ಮಹಿಳೆ ನಂದಿನಿ ಅವರನ್ನು ಆಕೆಯ ಪತಿ ಮಂಜುನಾಥ್ ಭಾನುವಾರ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ವೈದ್ಯರು ರಾತ್ರಿ ನಂದಿನಿಗೆ ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ. ಒಟ್ಟು ಎರಡು ಭಾರಿ ಶಸ್ತ್ರಚಿಕಿಸ್ತೆ ಮಾಡಿದ್ದಾರೆ. ಗುರುವಾರ ಬೆಳಗ್ಗೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಚಿಕಿತ್ಸೆ ನೀಡಿ ಆರೋಗ್ಯವಾಗಿದ್ದ ನಂದಿನಿ ಇದ್ದಕ್ಕಿಂದ್ದಂತೆ ಮರಣ ಹೊಂದಲು ಹೇಗೆ ಸಾಧ್ಯ. ಇದು ವೈದ್ಯರ ನಿರ್ಲಕ್ಷ್ಯದಿಂದಲೇ ಸಾವನ್ನಪ್ಪಿರುವುದು ಎಂದು ಸಂಭಂದಿಕರ ಆಕ್ರೋಶವಾಗಿತ್ತು.
ಮೃತ ನಂದಿನಿ ಸಂಬಂದಿಕರು ಮಾಧ್ಯಮದೊಂದಿಗೆ ಮಾತನಾಡಿ, ವೈದ್ಯರು ಬೆಳಿಗ್ಗೆಯಿಂದಲೂ ನಂದಿನಿಯನ್ನು ಕಾಣಲು ಪತಿ ಮಂಜುನಾಥ್, ಮಗ ಹಾಗೂ ಸಂಬಂಧಿಕರಿಗೆ ಅವಕಾಶಮಾಡಿಕೊಟ್ಟಿಲ್ಲ. ನಂದಿನಿ ಸಾವಿನ ಮಾಹಿತಿ ಮುಚ್ಚಿಟ್ಟು ಚಿಕಿತ್ಸೆ ನಾಟಕವಾಡಿದ್ದಾರೆ. ನಂದಿನಿ ಸಾವಿಗೆ ಖಾಸಗಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪ ಮಾಡಿದರು.