ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಕೋರಮಂಗಲದಲ್ಲಿ ಮಹಿಳೆ ಮೇಲೆ ನಾಲ್ವರಿಂದ ಸಾಮೂಹಿಕ ಅತ್ಯಾಚಾರ ಮಾಡಿರುವ ಆರೋಪ ಕೇಳಿಬಂದಿದೆ. ಸದ್ಯ ಪೊಲೀಸ್ ಠಾಣೆಯಲ್ಲಿ ಗ್ಯಾಂಗ್ ರೇಪ್ ಕೇಸ್ ದಾಖಲಾಗಿದ್ದು, ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶ ಮೂಲದ ಮೂವರು ಆರೋಪಿಗಳಾದ ಅಜಿತ್, ವಿಶ್ವಾಸ್, ಶಿವು ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ತಲೆಮರೆಸಿಕೊಂಡಿರುವ ಓರ್ವ ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ. ಆರೋಪಿಗಳು ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ತಡರಾತ್ರಿ ಹನ್ನೆರಡು ಘಂಟೆ ಸುಮಾರಿಗೆ ನಾಲ್ವರು ಮಹಿಳೆಯನ್ನು ಭೇಟಿ ಮಾಡಿದ್ದಾರೆ. ನಂತರ ಹಳೆ ಪರಿಚಯಸ್ಥರ ರೀತಿ ಮಾತನಾಡಿ ಕರೆದುಕೊಂಡು ಹೋಗಿದ್ದಾರೆ. ಮುಚ್ಚಿ ಹೋಗಿದ್ದ ಹೋಟೆಲ್ ಒಂದರ ಟೆರೇಸ್ ಮೇಲೆ ಕರೆದುಕೊಂಡು ಹೋಗಿ ಊಟ ಮಾಡಿದ್ದಾರೆ.
ಬಳಿಕ ನಾಲ್ವರಿಂದ ಮಹಿಳೆ ಮೇಲೆ ಅತ್ಯಾಚಾರವೆಸಗಿರುವ ಆರೋಪ ಮಾಡಲಾಗಿದೆ. ಬೆಳಗ್ಗೆ ಐದು ಘಂಟೆ ಸುಮಾರಿಗೆ ಮೊಬೈಲ್, ಪರ್ಸ್ ಕಿತ್ತುಕೊಂಡು ಮಹಿಳೆಯನ್ನು ಆರೋಪಿಗಳು ಓಡಿಸಿದ್ದಾರೆ. ಘಟನೆ ಬಳಿಕ 122 ಕರೆ ಮಾಡಿದ ಮಹಿಳೆ ಮಾಹಿತಿ ನೀಡಿದ್ದಾರೆ.