ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋನಾವಾಲಾದ ತುಂಗೌಲಿ ಪ್ರದೇಶದಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ ಮಹಿಳೆಯೊಬ್ಬಳ ಮೇಲೆ ಮೂವರು ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ವರದಿಯಾಗಿದೆ.
ಪೊಲೀಸರ ಪ್ರಕಾರ, ಮಹಿಳೆ ಒಂಟಿಯಾಗಿ ನಡೆದುಕೊಂಡು ಹೋಗುತ್ತಿದ್ದಾಗ 25 ರಿಂದ 35 ವರ್ಷ ವಯಸ್ಸಿನ ಮೂವರು ಅಪರಿಚಿತರು ಕಾರಿನಲ್ಲಿ ಬಂದು ಬಲವಂತವಾಗಿ ಆಕೆಯನ್ನು ಎಳೆದು ಒಳಗೆ ಕೂರಿಸಿದ್ದಾರೆ. ಬಳಿಕ ಲೋನಾವಾಲಾ ಒಳಗೆ ಮತ್ತು ಸುತ್ತಮುತ್ತಿನ ನಿರ್ಜನ ಪ್ರದೇಶಗಳಲ್ಲಿ ಕಾರನ್ನು ನಿಲ್ಲಿಸಿ ಅತ್ಯಾಚಾರ ಎಸಗಿದ್ದಾರೆ.
ಘಟನೆಯ ನಂತರ ಆರೋಪಿಗಳು ಹಲ್ಲೆ ನಡೆಸಿ, ಮಹಿಳೆಯನ್ನು ನಿರ್ಜನ ರಸ್ತೆಯಲ್ಲಿ ಬಿಟ್ಟು ಪರಾರಿಯಾಗಿದ್ದಾರೆ. ಗಂಭೀರ ಆಘಾತದ ನಡುವೆಯೂ ಮಹಿಳೆ ನೇರವಾಗಿ ಪೊಲೀಸ್ ಠಾಣೆಗೂ ತೆರಳಿ ದೂರು ನೀಡಿದ್ದಾಳೆ. ಲೋನಾವಾಲಾ ನಗರ ಪೊಲೀಸರು ಕೂಡಲೇ ಎಫ್‌ಐಆರ್ ದಾಖಲಿಸಿ ತನಿಖೆಗೆ ಕೈ ಹಾಕಿದ್ದಾರೆ.
ಪೊಲೀಸ್ ಇನ್ಸ್‌ಪೆಕ್ಟರ್ ರಾಜೇಶ್ ರಾಮಘರೆ ಅವರು ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ ಎಂದು ದೃಢಪಡಿಸಿದ್ದು, ಉಳಿದ ಇಬ್ಬರನ್ನು ಪತ್ತೆಹಚ್ಚಲು ವಿಶೇಷ ತಂಡಗಳನ್ನು ನೇಮಿಸಲಾಗಿದೆ ಎಂದು ತಿಳಿಸಿದ್ದಾರೆ.