Wednesday, December 31, 2025

ಲಿಫ್ಟ್ ಕೊಡುವುದಾಗಿ ನಂಬಿಸಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ; ಆರೋಪಿಗಳು ಅರೆಸ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲಿಫ್ಟ್ ಕೊಡುವುದಾಗಿ ನಂಬಿಸಿ ಮಹಿಳೆಯೊಬ್ಬರನ್ನು ಕಾರಿನಲ್ಲಿ ಅಪಹರಿಸಿ, ಇಬ್ಬರು ವ್ಯಕ್ತಿಗಳು ಸಾಮೂಹಿಕ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ಹರಿಯಾಣದ ಫರೀದಾಬಾದ್‌ನಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಸಂತ್ರಸ್ತ ಮಹಿಳೆ ತನ್ನ ಪತಿಯಿಂದ ಬೇರ್ಪಟ್ಟ ನಂತರ ತಾಯಿಯೊಂದಿಗೆ ವಾಸಿಸುತ್ತಿದ್ದರು. ಡಿಸೆಂಬರ್ 29ರ ರಾತ್ರಿ ತಾಯಿಯೊಂದಿಗೆ ಮನಸ್ತಾಪ ಮಾಡಿಕೊಂಡ ಅವರು, ಸ್ನೇಹಿತೆಯನ್ನು ಭೇಟಿ ಮಾಡಲು ಮನೆಯಿಂದ ಹೊರಬಂದಿದ್ದರು. ರಾತ್ರಿ ಸುಮಾರು 12.30ರ ವೇಳೆಗೆ ಮನೆಗೆ ಮರಳಲು ಮೆಟ್ರೋ ಚೌಕ್ ಬಳಿ ಆಟೋಗಾಗಿ ಕಾಯುತ್ತಿದ್ದರು.

ಈ ಸಂದರ್ಭದಲ್ಲಿ ವ್ಯಾನ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಮಹಿಳೆಗೆ ಲಿಫ್ಟ್ ನೀಡುವುದಾಗಿ ನಂಬಿಸಿ ವಾಹನ ಹತ್ತಿಸಿಕೊಂಡಿದ್ದಾರೆ. ನಂತರ ಆಕೆಯನ್ನು ಗುರುಗ್ರಾಮದ ಕಡೆಯ ನಿರ್ಜನ ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಈ ಘೋರ ಕೃತ್ಯ ಎಸಗಿದ್ದಾರೆ. ಕೇವಲ ಅತ್ಯಾಚಾರವಷ್ಟೇ ಅಲ್ಲದೆ, ಮಹಿಳೆಯ ಮೇಲೆ ಹಲ್ಲೆ ನಡೆಸಲಾಗಿದ್ದು, ಅವರ ತಲೆಗೆ ಗಂಭೀರ ಗಾಯಗಳಾಗಿವೆ. ಪ್ರಸ್ತುತ ಮಹಿಳೆಗೆ 12 ಹೊಲಿಗೆಗಳನ್ನು ಹಾಕಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಡಿಸೆಂಬರ್ 30ರಂದು ಸಂತ್ರಸ್ತೆಯ ಕುಟುಂಬ ದೂರು ನೀಡಿದ ಕೂಡಲೇ ಎಚ್ಚೆತ್ತ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ತನಿಖೆ ಆರಂಭಿಸಿದ ಕೆಲವೇ ಗಂಟೆಗಳಲ್ಲಿ ಫರೀದಾಬಾದ್ ನಿವಾಸಿಗಳಾದ ಇಬ್ಬರು ಆರೋಪಿಗಳನ್ನು ಪೊಲೀಸರು ಸೆರೆಹಿಡಿದಿದ್ದಾರೆ.

error: Content is protected !!