ಹೊಸದಿಗಂತ ಡಿಜಿಟಲ್ ಡೆಸ್ಕ್:
ನಗರದಲ್ಲಿರುವ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (SMVT) ನ ಪ್ಲಾಟ್‌ಫಾರ್ಮ್‌ನಲ್ಲಿ ಹೃದಯಸ್ಪರ್ಶಿ ಘಟನೆಯೊಂದು ನಡೆದಿದೆ. ರೈಲಿಗಾಗಿ ಕಾಯುತ್ತಿದ್ದ 23 ವರ್ಷದ ಅರ್ಚನಾ ಕುಮಾರಿ ಎಂಬ ಮಹಿಳೆಗೆ ಆಕಸ್ಮಿಕವಾಗಿ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ಕರೆದೊಯ್ಯುವ ಸೌಲಭ್ಯವಿಲ್ಲದ ಕಾರಣ ಅಲ್ಲಿಯೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಈ ವೇಳೆ ರೈಲ್ವೆ ಮಹಿಳಾ ಸಿಬ್ಬಂದಿ ಹಾಗೂ ಇತರೆ ಪ್ರಯಾಣಿಕರು ಸಮಯೋಚಿತವಾಗಿ ನೆರವಿಗೆ ಧಾವಿಸಿದ್ದು, ಯಶಸ್ವಿಯಾಗಿ ಹೆರಿಗೆ ನಡೆಸಿದ್ದಾರೆ. ತಾಯಿ ಹಾಗೂ ಮಗು ಇಬ್ಬರೂ ಆರೋಗ್ಯವಾಗಿರುವುದಾಗಿ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಘಟನೆಯ ವೇಳೆಯಲ್ಲಿ ಆರ್‌ಪಿಎಫ್ ಕಾನ್‌ಸ್ಟೆಬಲ್ ಅಮೃತ ಹಾಗೂ ಕರ್ತವ್ಯದಲ್ಲಿದ್ದ ಆರ್‌ವಿ ಸುರೇಶ್ ಬಾಬು ಎಂಬವರು ತಕ್ಷಣ ವೈದ್ಯಕೀಯ ಸಹಾಯಕ್ಕಾಗಿ ಕ್ರಮ ಕೈಗೊಂಡಿದ್ದು, ಇಂತಹ ತುರ್ತು ಪರಿಸ್ಥಿತಿಯಲ್ಲಿಯೂ ಸಹ ಸುರಕ್ಷಿತವಾಗಿ ಹೆರಿಗೆ ನಡೆಯಲು ಕಾರಣವಾಗಿದ್ದಾರೆ.
ಈ ಬಗ್ಗೆ ನೈರುತ್ಯ ರೈಲ್ವೆಯ ಬೆಂಗಳೂರು ವಿಭಾಗೀಯ ಕಚೇರಿ ಟ್ವೀಟ್ ಮಾಡಿದ್ದು, “ಎಸ್‌ಎಂವಿಟಿ ನಿಲ್ದಾಣದಲ್ಲಿ ಗರ್ಭಿಣಿ ಪ್ರಯಾಣಿಕರೊಬ್ಬರು ಗಂಡು ಮಗುವಿಗೆ ಜನ್ಮ ನೀಡಿದ್ದು, ಸಿಬ್ಬಂದಿಯ ತಕ್ಷಣದ ಕ್ರಮದಿಂದ ತಾಯಿ ಮತ್ತು ಮಗು ಇಬ್ಬರೂ ಸುರಕ್ಷಿತವಾಗಿದ್ದಾರೆ. ನಂತರ ಹೆಚ್ಚಿನ ಆರೈಕೆಗಾಗಿ ಅವರನ್ನು ಸಿವಿ ರಾಮನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಭಾರತೀಯ ರೈಲ್ವೆ ತನ್ನ ಪ್ರಯಾಣಿಕರ ಕಲ್ಯಾಣಕ್ಕೆ ಬದ್ಧವಾಗಿದೆ,” ಎಂದು ತಿಳಿಸಿದೆ.
ತುರ್ತು ನೆರವಿಗೆ ಧಾವಿಸಿದ ರೈಲ್ವೆ ಸಿಬ್ಬಂದಿಗೆ ಅರ್ಚನಾ ಅವರ ಪತಿ ನಿಶಾಂಕ್ ಕುಮಾರ್ ಧನ್ಯವಾದ ತಿಳಿಸಿದ್ದಾರೆ.