ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾನುವಾರುಗಳಿಗೆ ಮೇವು ತರಲು ಕಾಡಿಗೆ ತೆರಳಿದ್ದ ಮಹಿಳೆಯ ಮೇಲೆ ಚಿರತೆ ದಾಳಿ ಮಾಡಿರುವ ಘಟನೆ ಉತ್ತರಾಖಂಡ ರಾಜ್ಯದಲ್ಲಿ ನಡೆದಿದೆ. ಉತ್ತರಾಖಂಡದ ಸುಖಿಧಾಂಗ್ ಪ್ರದೇಶದಲ್ಲಿ ಭಾನುವಾರ ಚಿರತೆಯೊಂದು ಮಹಿಳೆಯೊಬ್ಬರನ್ನು ಕೊಂದಿದ್ದು, ಮೃತರನ್ನು ಚಂದ್ರಾವತಿ ಎಂದು ಗುರುತಿಸಲಾಗಿದೆ. ಅಷ್ಟೇ ಅಲ್ಲದೆ, ದನ ಮೇಯಿಸಲು ಕಾಡಿಗೆ ಹೋಗುತ್ತಿದ್ದ ಕೆಲ ಮಹಿಳೆಯರ ಮೇಲೂ ಚಿರತೆ ದಾಳಿ ಮಾಡಿದೆ.
ಚಂದ್ರಾವತಿಯನ್ನು ಚಿರತೆ ಎಳೆದೊಯ್ದಿದ್ದು, ಉಳಿದ ಮಹಿಳೆಯರು ತಪ್ಪಿಸಿಕೊಂಡು ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ ಎಂದು ಅರಣ್ಯಾಧಿಕಾರಿ ತಿಳಿಸಿದ್ದಾರೆ. ಗಾಯಗೊಂಡ ಕೆಲವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅರಣ್ಯಾಧಿಕಾರಿಗಳು ಚಂದ್ರಾವತಿಗಾಗಿ ಹುಡುಕಾಟ ನಡೆಸಿದಾಗ ಅರಣ್ಯದ ಸಮೀಪ ಆಕೆಯ ಶವ ಪತ್ತೆಯಾಗಿದೆ. ಮಾಹಿತಿ ಪಡೆದ ಅರಣ್ಯ ಇಲಾಖೆ ತಂಡ ಸ್ಥಳಕ್ಕೆ ಆಗಮಿಸಿದೆ.
ಘಟನೆಗೆ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸಂತಾಪ ವ್ಯಕ್ತಪಡಿಸಿದ್ದಾರೆ. ಸಂತ್ರಸ್ತ ಕುಟುಂಬಕ್ಕೆ ಎಲ್ಲ ರೀತಿಯ ನೆರವು ನೀಡುವಂತೆ ಜಿಲ್ಲಾಡಳಿತಕ್ಕೆ ಸಿಎಂ ಆದೇಶ ನೀಡಿದ್ದಾರೆ.