ಹೊಸ ದಿಗಂತ ವರದಿ, ಗುಬ್ಬಿ:
ಒಂಟಿಯಾಗಿ ಮನೆಯಲ್ಲಿದ್ದ ಮಹಿಳೆಯ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ತಾಲ್ಲೂಕಿನ ಸಿ.ಎಸ್.ಪುರ ಹೋಬಳಿ ಹಿಂಡಿಸಿಗೆರೆ ಗ್ರಾಮದಲ್ಲಿ ನಡೆದಿದೆ.
ಹಿಂಡಿಸಿಗೆರೆ ಗ್ರಾಮದ ತೋಟದ ಮನೆ ನಿವಾಸಿ ಮಂಜುಳಾ (38) ಹತ್ಯೆಯಾದ ಮಹಿಳೆ. ಪತಿ ಕಳೆದುಕೊಂಡು ಪುತ್ರನ ಜೊತೆ ತೋಟದಮನೆಯಲ್ಲಿ ವಾಸವಾಗಿದ್ದ ಮಂಜುಳಾ ಇತ್ತೀಚಿಗೆ ಮಗನ ಮದುವೆ ಮಾಡಿದ್ದರು. ಪತ್ನಿ ಊರಿಗೆ ಮಗ ತೆರಳಿದ್ದ ಸಂದರ್ಭ ಮನೆಯಲ್ಲಿ ಒಂಟಿಯಾಗಿದ್ದ ಸಮಯ ತಿಳಿದು ಹಂತಕರು ಈ ಕೃತ್ಯವೆಸಗಿದ್ದಾರೆ.
ಬೆಳಿಗ್ಗೆ ತೋಟದಮನೆ ಬಳಿ ಮೈದುನಾ ಬಂದ ವೇಳೆ ಈ ಹತ್ಯೆ ಬೆಳಕಿಗೆ ಬಂದಿದೆ. ಸಿ.ಎಸ್.ಪುರ ಪೊಲೀಸ್ ಠಾಣೆಗೆ ವಿಷಯ ತಿಳಿದ ತಕ್ಷಣ ಕಾರ್ಯ ಪ್ರವೃತ್ತರಾಗಿ ಹಂತಕರ ಪತ್ತೆಗೆ ತನಿಖೆ ಆರಂಭಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಹಣಕಾಸಿನ ವಿಚಾರಕ್ಕೆ ಕೊಲೆ ನಡೆದಿರಬಹುದು ಎಂದು ತಿಳಿದು ಬಂದಿದೆ.
ಈ ವಿಚಾರವಾಗಿ ಸಿ. ಎಸ್. ಪುರ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದ್ದು ತನಿಖೆ ಚುರುಕುಗೊಳಿಸಲಾಗಿದೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆಶೋಕ್.ಕೆ.ವಿ., ಅಪರ ವರಿಷ್ಠಾಧಿಕಾರಿ ಗೋಪಾಲ್, ಡಿವೈಎಸ್ಪಿ ಶೇಖರ್, ಸಿಪಿಐ ರಾಘವೇಂದ್ರ, ಪಿಎಸ್ಐ ಧರ್ಮಾಂಜಿ ಭೇಟಿ ನೀಡಿದರು. ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳದೊಂದಿಗೆ ತೆರಳಿ ತನಿಖೆ ಆರಂಭಿಸಲಾಗಿದೆ.

