ಕೊಡಗು ಜಿಲ್ಲಾಡಳಿತದ ಸತತ ಪ್ರಯತ್ನ: ಕುವೈತ್‌ನಲ್ಲಿ ಸಿಲುಕಿದ್ದ ಮಹಿಳೆ ಸುರಕ್ಷಿತವಾಗಿ ಭಾರತಕ್ಕೆ

ಹೊಸದಿಗಂತ ವರದಿ ಮಡಿಕೇರಿ:

ಉದ್ಯೋಗಕ್ಕೆಂದು ಏಜೆಂಟ್ ಮೂಲಕ ಕುವೈತ್’ಗೆ ತೆರಳಿ ವೀಸಾ ಅವಧಿ ಮುಗಿದ ಬಳಿಕ ಸಂಕಷ್ಟಕ್ಕೆ ಸಿಲುಕಿದ್ದ ಮಹಿಳೆಯೊಬ್ಬರನ್ನು ಸುರಕ್ಷಿತವಾಗಿ ಕರೆತರುವಲ್ಲಿ ಜಿಲ್ಲಾಡಳಿತ ಯಶಸ್ವಿಯಾಗಿದೆ.

ಕೊಡಗು ಜಿಲ್ಲೆಯ ವೀರಾಜಪೇಟೆ ತಾಲೂಕಿನ ಕರಡಿಗೋಡು ನಿವಾಸಿ ಪಾರ್ವತಿ ಎಂಬ ಮಹಿಳೆ ಉದ್ಯೋಗ ನಿಮಿತ್ತ ಕೇರಳಕ್ಕೆ ತೆರಳಿದ್ದರು. ಅಲ್ಲಿಂದ ಕೆಲಸಕ್ಕೆಂದು ಏಜೆಂಟ್ ಮುಖಾಂತರ ಕುವೈತ್’ಗೆ ಹೋಗಿದ್ದರು. ಅವರ ವೀಸಾ ಅವಧಿ ಮುಗಿದ ಬಳಿಕ ಅವರ ವೀಸಾವನ್ನೂ ನವೀಕರಿಸದೆ, ತಾಯ್ನಾಡಿಗೂ ಕರೆತರದೆ ಅವರನ್ನು ಅಲ್ಲಿಯೇ ಕೂಡಿ ಹಾಕಲಾಗಿತ್ತು. ಈ ಬಗ್ಗೆ ಆಕೆ ತನ್ನ ತಾಯಿಗೆ ನೀಡಿದ ಮಾಹಿತಿಯನ್ವಯ ಕೊಡಗು ಜಿಲ್ಲಾಡಳಿತಕ್ಕೆ ಈ ಬಗ್ಗೆ ದೂರು‌ ನೀಡಲಾಗಿತ್ತು.

ದೂರು ಸ್ವೀಕೃತವಾದ ಕೂಡಲೇ ಸಂತ್ರಸ್ತ ಮಹಿಳೆಯನ್ನು ಕ್ಷೇಮವಾಗಿ‌ ಕರೆ ತರುವ ಜವಾಬ್ದಾರಿಯನ್ನು ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರಾದ ಆರ್.ಎಂ.ಅನನ್ಯ ವಾಸುದೇವ್ ಅವರಿಗೆ ವಹಿಸಲಾಗಿತ್ತು.
ಸಂತ್ರಸ್ತ ಮಹಿಳೆಯೊಂದಿಗೆ ಸಂಪರ್ಕ ಸಾಧಿಸಿದ ಜಿಲ್ಲಾಡಳಿತ, ಅವರಿದ್ದ ಸ್ಥಳವನ್ನು ಗುರುತಿಸಿ ಕುವೈತ್’ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಹಾಗೂ ವಿದೇಶಾಂಗ ಸಚಿವಾಲಯಕ್ಕೆ ಮಾಹಿತಿ‌ ನೀಡಿತ್ತು.

ನಿರಂತರ ಸಂಪರ್ಕವನ್ನು ಸಾಧಿಸಿ ಸತತ ಪ್ರಯತ್ನದ ಮೂಲಕ ಭಾರತೀಯ ರಾಯಭಾರ ಕಚೇರಿಯ ಸಹಯೋಗದೊಂದಿಗೆ ಕೊಡಗು‌ ಜಿಲ್ಲಾಡಳಿತ ಸಂತ್ರಸ್ತ ಮಹಿಳೆಯನ್ನು ಕ್ಷೇಮವಾಗಿ‌ ಭಾರತಕ್ಕೆ‌ ಕರೆ ತರುವಲ್ಲಿ ಯಶಸ್ವಿಯಾಗಿದ್ದು, ಮಂಗಳವಾರ ಬೆಳಗ್ಗೆ 9.10ಕ್ಕೆ ಸಂತ್ರಸ್ತ ‌ಮಹಿಳೆ ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಅಲ್ಲಿಂದ ಪಾರ್ವತಿ ಅವರು ಕೊಡಗಿಗೆ ಆಗಮಿಸುತ್ತಿರುವುದಾಗಿ ಜಿಲ್ಲಾಡಳಿತ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here