ಹೊಸದಿಗಂತ ವರದಿ ಹಾಸನ:
ಚಲಿಸುತ್ತಿದ್ದ ರೈಲಿಗೆ ಹತ್ತಲು ಹೋಗಿ ಆಯತಪ್ಪಿ ಬಿದ್ದು ಮಹಿಳೆಯ ಎರಡು ಕಾಲುಗಳು ಮುರಿದಿರುವ ಘಟನೆ ಹಾಸನದ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ಗಾಯಗೊಂಡಿರುವ ಮಹಿಳೆ ಸಕಲೇಶಪುರ ಮೂಲದವರು ಎಂದು ತಿಳಿದು ಬಂದಿದ್ದು. ಮೈಸೂರಿನಿಂದ ಬೆಳಗಾವಿಗೆ ತೆರಳುತ್ತಿದ್ದ ರೈಲು ಹಾಸನದ ನಿಲ್ದಾಣಕ್ಕೆ ಬಂದಾಗ ಈ ಅವಘಡ ಸಂಭವಿಸಿದೆ.
ಮಹಿಳೆ ಸಕಲೇಶಪುರಕ್ಕೆ ತೆರಳಲು ಹಾಸನದ ರೈಲು ನಿಲ್ದಾಣದಲ್ಲಿ ಚಲಿಸುತ್ತಿರುವಾಗಲೇ ರೈಲು ಹತ್ತಲು ಮುಂದಾಗಿದ್ದರು ಎಂದು ತಿಳಿದು ಬಂದಿದೆ. ಈ ವೇಳೆ ಅಲ್ಲೇ ಕೆಲಸ ಮಾಡುತ್ತಿದ್ದ ಹೋಮ್ ಗಾರ್ಡ್ ಜಯಂತಿ ಎಂಬುವವರು ರೈಲನ್ನು ನಿಲ್ಲಿಸಿ ಬಳಿಕ ರೈಲಿನ ಅಡಿ ಸಿಲುಕಿದ್ದ ಮಹಿಳೆಯನ್ನು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ.
ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ರವಾನಿಸಲಾಗಿದ್ದು, ಮಹಿಳೆಯ ಸ್ಥಿತಿ ಚಿಂತಾಜನಕವಾಗಿದೆ.