ಹೊಸದಿಗಂತ ವರದಿ,ಮಂಡ್ಯ :
ಬೆಳಗಾವಿಯ ವಂಟಮೂರಿ ಗ್ರಾಮದ ಮಹಿಳೆಯನ್ನು ವಿವಸ್ತ್ರಗೊಳಿಸಿ ಕಂಬಕ್ಕೆ ಕಟ್ಟಿ ಹಲ್ಲೆ ಮಾಡಿರುವ ಅಮಾನುಷ ಘಟನೆ ಬಗ್ಗೆ ಸದನದಲ್ಲಿ ಚರ್ಚೆಗೆ ಅವಕಾಶ ನೀಡದ ಸರ್ಕಾರ ಹಾಗೂ ಸಭಾಧ್ಯಕ್ಷರ ಧೋರಣೆ ಖಂಡಿಸಿ ವಿಪಕ್ಷ ನಾಯಕ ಆರ್. ಅಶೋಕ್ ನೇತೃತ್ವದಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಎದರು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಈ ವೇಳೆ ಸುದ್ಧಿಗಾರರೊಂದಿಗೆ ಮಾತನಾಡಿದ ಆರ್. ಅಶೋಕ್, ಬೆಳಗಾವಿ ಜಿಲ್ಲೆಯಲ್ಲಿ ನಡೆದಿರುವ ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ ಮಾಡಿರುವ ಪ್ರಕರಣ ದೇಶದಲ್ಲಿ ಹಿಂದೆಂದೂ ನಡೆಯದಿರದ ಅಮಾನುಷ ಪ್ರಕರಣ ಇದಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಸದನದಲ್ಲಿ ಪ್ರಕರಣ ಕುರಿತು ಹೇಳಿಕೆ ನೀಡಿ ಯಾವ ರೀತಿ ಕ್ರಮ ಕೈಗೊಳ್ಳಲಾಗಿದೆ ಎಂಬ ಮಾಹಿತಿ ನೀಡಬೇಕಾಗಿತ್ತು ಆದರೆ ವಿಷಯ ಪ್ರಸ್ತಾಪಿಸಿದರೆ ಎಲ್ಲಿ ಚರ್ಚೆಗೆ ಬರಲಿದೆ ಎಂಬ ಭಯದಿಂದ ಪ್ರಕರಣದ ಪ್ರಸ್ತಾಪವನ್ನೇ ಮಾಡಲಿಲ್ಲ ಎಂದು ಹೇಳಿದರು.
ಅಧಿವೇಶನ ನಡೆಯುವ ಜಿಲ್ಲೆಯಲ್ಲಿ ಪ್ರಕರಣ ನಡೆದಿದ್ದರೂ ಸರ್ಕಾರ ಗಂಭೀರವಾಗಿ ಪರಿಗಣಿಸಲಿಲ್ಲ, ಪ್ರಕರಣದ ಪ್ರಾಥಮಿಕ ಮಾಹಿತಿ ವರದಿ ನೋಡಿದರೆ ಎಂತಹ ಅಮಾನುಷ ನಡೆದಿದೆ ಎಂಬುದು ತಿಳಿಯಲಿದೆ, ಆದರೂ ಸಹ ಕಾಂಗ್ರೆಸ್ ಏನು ನಡೆದಿಲ್ಲ ಎಂದು ಬೊಬ್ಬೆ ಹಾಕಿತು, ಸರ್ಕಾರ ಪ್ರಕರಣ ಮುಚ್ಚಿ ಹಾಕಲು ಪ್ರಯತ್ನಿಸಿತು, ಸಂತ್ರಸ್ತ ಮಹಿಳೆಗೆ ಘಟನೆ ನಡೆದು ಹಲವು ದಿನಗಳು ಕಳೆದರೂ ಪರಿಹಾರ ನೀಡದೆ ನಿರ್ಲಕ್ಷ ವಹಿಸಿತ್ತು, ಬಿಜೆಪಿ ಪಕ್ಷದ ಸತ್ಯಶೋಧನ ಸಮಿತಿ ತಂಡ ಭೇಟಿ ನೀಡುವ ವಿಚಾರ ತಿಳಿದು ಸಂತ್ರಸ್ತ ಮಹಿಳೆಗೆ ಪರಿಹಾರ ನೀಡಿದೆ, ಇಷ್ಟು ದಿನ ಏಕೆ ನೀಡಿರಲಿಲ್ಲ ಎಂದು ಪ್ರಶ್ನಿಸಿದರು.
ನೊಣವಿನಕೆರೆ ಸ್ವಾಮೀಜಿ ಡಿ,ಕೆ ಶಿವಕುಮಾರ್ ಮುಂದಿನ ಮುಖ್ಯಮಂತ್ರಿ ಎಂದು ಭವಿಷ್ಯ ನುಡಿದಿದ್ದಾರೆ, ಕಾಂಗ್ರೆಸ್ ನಾಯಕ ಹರಿಪ್ರಸಾದ್ ಮುಖ್ಯಮಂತ್ರಿ ಗಾದಿಗೆ ಏರಿಸೋದು ಗೊತ್ತು,ಇಳಿಸುವುದು ಗೊತ್ತು ಎಂದರೆ, ಪರಮೇಶ್ವರ್ ನಾನೇ ಮುಂದಿನ ಮುಖ್ಯಮಂತ್ರಿ ಅನ್ನುತಾರೆ, ಮುಂದಿನ ಬಜೆಟ್ ನಾನೇ ಮಂಡಿಸುವುದಾಗಿ ಮುಖ್ಯಮಂತ್ರಿ ಹೇಳಿದರೆ ಡಿ.ಕೆ ಶಿವಕುಮಾರ್ ಕಾಂಗ್ರೆಸ್ ಪಕ್ಷದವರು ಮಂಡಿಸುತ್ತಾರೆ ಎಂದು ಹೇಳುತ್ತಾರೆ, ಇವರೆಲ್ಲ ಹೀಗೆ ಹೇಳುವಾಗ ಸಿದ್ದರಾಮಯ್ಯ ದಮ್ಮು,ತಾಕತ್ತು ಎಲ್ಲಿ ಹೋಗಿದೆ ಎಂದು ಬಿಜೆಪಿ ಪಕ್ಷದ ಅಧ್ಯಕ್ಷ ಜೆ.ಪಿ ನಡ್ಡ ಬಗ್ಗೆ ಟೀಕೆ ಮಾಡಿರುವುದಕ್ಕೆ ಮುಖ್ಯಮಂತ್ರಿಗೆ ತಿರುಗೇಟು ನೀಡಿದರು.