ಮಹಿಳೆಯರು ಕುಟುಂಬಕ್ಕೆ ಭಾರವಲ್ಲ: ಸುಪ್ರೀಂ ಕೋರ್ಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪ್ರತಿಯೊಂದು ಮನೆಗೆ ಪುತ್ರಿಯರು ಭಾರವಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಮಹಿಳೆಗೆ ಆಕೆಯ ತಂದೆಯಿಂದ ಜೀವನಾಂಶ ನೀಡುವ ವಿಷಯಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಯ ನಡೆಸಿದ ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್ ಮತ್ತು ಎಎಸ್ ಬೋಪಣ್ಣ ಅವರ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಮಹಿಳೆ ಪರ ವಕೀಲರು ಹೆಣ್ಣು ಮಕ್ಕಳೆಂದರೆ ಮನೆಗೆ ಭಾರ ಎಂದು ಹೇಳಿದ್ದರು. ಈ ವೇಳೆ ಸಂವಿಧಾನದ ಪರಿಚ್ಛೇದ 14 ನ್ನು ಉಲ್ಲೇಖಿಸಿದ ನ್ಯಾಯಮೂರ್ತಿ ಚಂದ್ರಚೂಡ್, ಮಹಿಳೆಯರು ಕುಟುಂಬಕ್ಕೆ ಭಾರವಲ್ಲ ಎಂದರು.

ಕಕ್ಷಿದಾರರು ತನ್ನ ಮಗಳಿಗೆ ಪ್ರತಿ ತಿಂಗಳಿಗೆ ನೀಡಬೇಕಿದ್ದ 8 ಸಾವಿರ ರೂಪಾಯಿ ಹಾಗೂ ಪತ್ನಿಗೆ ಪ್ರತಿ ತಿಂಗಳಿಗೆ ನೀಡಬೇಕಿದ್ದ 400 ರೂಪಾಯಿ ಜೀವನಾಂಶದ ಮೊತ್ತವನ್ನು ಏಪ್ರಿಲ್ 2018 ರಿಂದ ನೀಡಿಲ್ಲ ಎಂದು ಕಕ್ಷಿದಾರರ ವಕೀಲರು ಅಕ್ಟೋಬರ್ 2020ರಲ್ಲಿ ಸುಪ್ರೀಂ ಕೋರ್ಟ್​ಗೆ ತಿಳಿಸಿದ್ದರು. ಇದನ್ನು ಪರಿಗಣಿಸಿದ್ದ ನ್ಯಾಯಾಲಯ, ಮಗಳು ಹಾಗೂ ಪತ್ನಿಗೆ ಎರಡು ವಾರಗಳಲ್ಲಿ 2,50,000 ರೂಪಾಯಿಗಳನ್ನು ಪಾವತಿಸುವಂತೆ ಆದೇಶ ನೀಡಿತ್ತು.

ಇದೇ ವರ್ಷದ ಮೇ ತಿಂಗಳಲ್ಲಿ ಪ್ರಕರಣ ಮತ್ತೆ ವಿಚಾರಣೆಗೆ ಬಂದಾಗ ಕಳೆದ ವರ್ಷವೇ ಪತ್ನಿ ತೀರಿಕೊಂಡಿದ್ದಾರೆ ಎಂದು ತಿಳಿಸಲಾಗಿತ್ತು. ತಮ್ಮ ಕಕ್ಷಿದಾರರು ಮಗಳು ಹಾಗೂ ಪತ್ನಿಗೆ ನೀಡಬೇಕಿದ್ದ ಎಲ್ಲ ಜೀವನಾಂಶವನ್ನು ನೀಡಿದ್ದಾರೆ ಎಂದು ತಿಳಿಸಿ ಅದಕ್ಕೆ ಸಂಬಂಧಿಸಿದ ಬ್ಯಾಂಕ್ ದಾಖಲೆಗಳನ್ನು ಸಲ್ಲಿಸಿದ್ದರು.

ಈ ಪ್ರಕರಣದ ಮತ್ತೊಮ್ಮೆ ವಿಚಾರಣೆಗೆ ಬಂದಾಗ, ಕಕ್ಷಿದಾರರ ಪುತ್ರಿ ಈಗ ಲಾಯರ್ ಆಗಿದ್ದು, ನ್ಯಾಯಾಂಗ ಇಲಾಖೆಯ ಪ್ರಿಲಿಮ್ಸ್ ಪರೀಕ್ಷೆ ಪಾಸು ಮಾಡಿರುವುದಾಗಿ ನ್ಯಾಯಾಲಯಕ್ಕೆ ಮಾಹಿತಿ ನೀಡಲಾಯಿತು. ಮಹಿಳೆಯು ತನ್ನ ತಂದೆಯ ಮೇಲೆ ಅವಲಂಬಿತವಾಗಿರುವ ಬದಲಾಗಿ ಅಧ್ಯಯನಗಳ ಕಡೆಗೆ ಗಮನಹರಿಸುವುದು ಸೂಕ್ತ ಎಂದು ನ್ಯಾಯಾಲಯ ಹೇಳಿತು.

ಮಹಿಳೆ ಹಾಗೂ ಆಕೆಯ ತಂದೆ ಕಳೆದ ಹಲವಾರು ವರ್ಷಗಳಿಂದ ಮಾತನಾಡಿಲ್ಲ . ಇಬ್ಬರೂ ಮಾತುಕತೆ ಆರಂಭಿಸುವಂತೆ ಸಲಹೆ ನೀಡಿದೆ. ಅಲ್ಲದೆ ಮಹಿಳೆಗೆ ಆಕೆಯ ತಂದೆ ಆಗಸ್ಟ್ 8 ರೊಳಗೆ 50 ಸಾವಿರ ರೂಪಾಯಿ ನೀಡುವಂತೆ ಆದೇಶಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!