ಮೈಮೇಲೆ ಅನಾವಶ್ಯಕ ಕೂದಲು ತೆಗೆದುಹಾಕಲು ವ್ಯಾಕ್ಸಿಂಗ್, ಶೇವಿಂಗ್ ಹಾಗೂ ಕೂದಲು ತೆಗೆಯುವ ಕ್ರೀಮ್‌ಗಳು ಸಾಮಾನ್ಯವಾಗಿ ಬಳಸಲಾಗುತ್ತವೆ. ಈ ನಡುವೆ, ಮಾರುಕಟ್ಟೆಯಲ್ಲಿ ಕಡಿಮೆ ದರದಲ್ಲಿ ಲಭ್ಯವಿರುವ ಕೂದಲು ತೆಗೆಯುವ ಕ್ರೀಮ್‌ಗಳ ಅತಿಯಾದ ಬಳಕೆ ಚರ್ಮಕ್ಕೆ ಹಾನಿಕಾರಕ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ತಕ್ಷಣ ರಿಸಲ್ಟ್ ನೀಡುವ ಈ ಉತ್ಪನ್ನಗಳು ಕೆಲವರಲ್ಲಿ ಉರಿ, ಅಲರ್ಜಿ ಹಾಗೂ ವರ್ಣದ್ರವ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.
ಚರ್ಮದ ಸುಡುವಿಕೆ ಹೆಚ್ಚಾಗುತ್ತದೆ
ಬಹುತೇಕ ಕೂದಲು ತೆಗೆಯುವ ಕ್ರೀಮ್‌ಗಳಲ್ಲಿ ಕ್ಯಾಲ್ಸಿಯಂ ಥಿಯೋಗ್ಲೈಕೋಲೇಟ್ ಮತ್ತು ಪೊಟ್ಯಾಸಿಯಮ್ ಹೈಡ್ರಾಕ್ಸೈಡ್‌ನಂತಹ ಶಕ್ತಿಶಾಲಿ ರಾಸಾಯನಿಕಗಳು ಇರುತ್ತವೆ. ಇವು ಚರ್ಮದ ಮೇಲ್ಮಟ್ಟವನ್ನು ಸುಡುತ್ತದೆ. ಇದರಿಂದ ಉರಿ ಹಾಗೂ ಗುಳ್ಳೆಗಳನ್ನೂ ಉಂಟಾಗಬಹುದು. ಕೆಲವೊಮ್ಮೆ ಈ ಅಪಾಯಗಳು ತಕ್ಷಣವೇ ಕಾಣದಿದ್ದರೂ, ನಿರಂತರ ಬಳಕೆಯು ಚರ್ಮದ ತಾತ್ಕಾಲಿಕ ಮತ್ತು ದೀರ್ಘಕಾಲಿಕ ಹಾನಿಗೆ ದಾರಿ ಮಾಡಬಹುದು.
ವರ್ಣದ್ರವ್ಯದ ಅಪಾಯವಿದೆ
ಕೂದಲು ತೆಗೆಯುವ ಕ್ರೀಮ್‌ಗಳು ಎಲ್ಲರ ಚರ್ಮಕ್ಕೆ ಸೂಟ್ ಆಗುವುದಿಲ್ಲ. ತಪ್ಪಾದ ಉತ್ಪನ್ನವನ್ನು ಬಳಸಿದರೆ ಚರ್ಮದ ಮೇಲ್ಮಟ್ಟದಲ್ಲಿ ವರ್ಣದ್ರವ್ಯವು ಉಂಟಾಗಿ, ಕಪ್ಪು ಕಲೆಗಳು ಅಥವಾ ಅಸಮಾನ ವರ್ಣತೆ ಉಂಟಾಗುವ ಸಾಧ್ಯತೆ ಹೆಚ್ಚಾಗುತ್ತದೆ. ವಿಶೇಷವಾಗಿ ಅಂಡರ್‌ಆರ್ಮ್, ಕಾಲುಗಳಲ್ಲಿ ತೊಂದರೆ ಕಾಣಿಸಿಕೊಳ್ಳುತ್ತದೆ.
ಚರ್ಮದ ಒಣತನ ಹೆಚ್ಚಾಗಬಹುದು
ಕ್ರೀಮ್ ಬಳಕೆಯು ಕೆಲವರಲ್ಲಿ ಚರ್ಮದ ತೇವಾಂಶ ಕಳೆದು ಹೋಗುವಂತೆ ಮಾಡಬಹುದು. ಇದರ ಪರಿಣಾಮವಾಗಿ ಚರ್ಮ ಒಣಗುವಿಕೆ, ಬಿರುಕು ಮತ್ತು ಇತರ ಚರ್ಮ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
ಅಲರ್ಜಿ ಪ್ರತಿಕ್ರಿಯೆಗೆ ಕಾರಣ
ಸೂಕ್ಷ್ಮ ಚರ್ಮ ಹೊಂದಿರುವವರು ಈ ಕ್ರೀಮ್‌ಗಳ ಬಳಕೆ ಮಾಡುವುದರಲ್ಲಿ ಎಚ್ಚರಿಕೆಯಿಂದ ಇರಬೇಕೆಂದು ತಜ್ಞರು ಸಲಹೆ ನೀಡುತ್ತಿದ್ದಾರೆ. ಇವು ಕೆಲವು ಬಾರಿ ತೀವ್ರ ಅಲರ್ಜಿ ಪ್ರತಿಕ್ರಿಯೆ – ತುರಿಕೆ, ಕೆಂಪು, ದದ್ದುಗಳು, ಉರಿ ಅಥವಾ ಊತವನ್ನು ಉಂಟುಮಾಡಬಹುದು. ಆದ್ದರಿಂದ ಹೊಸ ಉತ್ಪನ್ನ ಬಳಸುವ ಮೊದಲು ಪ್ಯಾಚ್ ಟೆಸ್ಟ್ ಮಾಡುವುದು ಉತ್ತಮ.
ಬಳಕೆ ನಂತರ ಲೋಷನ್ ಹಚ್ಚಿ
ಉತ್ಪನ್ನದ ನಿರ್ದೇಶನದಂತೆ ನಿಗದಿತ ಸಮಯಕ್ಕೆ ಒಳಗಾಗಿ ಕ್ರೀಮ್ ತೆಗೆದುಹಾಕಿ, ಬಳಿಕ ಚರ್ಮವನ್ನು ಶಾಂತಗೊಳಿಸಲು ಸೌಮ್ಯ ಲೋಷನ್ ಅಥವಾ ಅಲೋವೆರಾ ಬಳಕೆ ಮಾಡುವುದು ಉತ್ತಮ. ಇದರಿಂದ ಚರ್ಮದ ನೈಸರ್ಗಿಕ ಸಮತೋಲನವನ್ನು ಉಳಿಸಿಕೊಳ್ಳಬಹುದು.
ಚರ್ಮ ವೈದ್ಯರ ಸಲಹೆ ಕಡ್ಡಾಯ
ಈ ಮಾಹಿತಿಯು ಸಾಮಾನ್ಯ ಅರಿವು ನೀಡಲು ರೂಪುಗೊಂಡಿದ್ದು, ತಜ್ಞರ ಸಲಹೆ ಅನಿವಾರ್ಯ. ಚರ್ಮದ ಮೇಲೆ ಯಾವುದೇ ತೊಂದರೆ ಕಾಣಿಸಿಕೊಂಡರೆ ತಕ್ಷಣವೇ ಚರ್ಮವೈದ್ಯರನ್ನು ಸಂಪರ್ಕಿಸುವುದು ಆರೋಗ್ಯಕರ ಕ್ರಮವಾಗಿದೆ.