ಹೆಣ್ಣುಮಕ್ಕಳ ಜೀವನದಲ್ಲಿ ಋತುಚಕ್ರವು ಸಹಜ ಮತ್ತು ಅಗತ್ಯವಾದ ಪ್ರಕ್ರಿಯೆ. ಸಾಮಾನ್ಯವಾಗಿ ಇದು ತೀರಾ ಕಷ್ಟವಿಲ್ಲದೇ ನಡೆಯಬಹುದು, ಆದರೆ ಕೆಲವು ಸಂದರ್ಭಗಳಲ್ಲಿ ಮುಟ್ಟಿನ ವೇಳೆ ಕಂಡುಬರುವ ಬದಲಾವಣೆಗಳು ಆರೋಗ್ಯ ಸಮಸ್ಯೆಗಳ ಸೂಚನೆಯಾಗಿರಬಹುದು. ಇತ್ತೀಚಿನ ದಿನಗಳಲ್ಲಿ 9-10 ವರ್ಷದೊಳಗಿನ ಮಕ್ಕಳಿಗೆ ಮುಟ್ಟಾಗುವುದು ಸಾಮಾನ್ಯವಾಗಿದೆ, ಇದು ದೀರ್ಘಕಾಲಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಋತುಚಕ್ರವು ಹಾರ್ಮೋನುಗಳು, ಸಂತಾನೋತ್ಪತ್ತಿ ಹಾಗೂ ದೇಹದ ಚಯಾಪಚಯ ಕ್ರಿಯೆಗಳಿಗೆ ನೇರ ಸಂಬಂಧ ಹೊಂದಿರುವುದರಿಂದ, ಅದರ ಮಾದರಿಯಲ್ಲಿ ಬರುವ ಬದಲಾವಣೆಗಳನ್ನು ನಿರ್ಲಕ್ಷಿಸಬಾರದು. ಜೀವನಶೈಲಿ, ಒತ್ತಡ, ಪಿಸಿಓಎಸ್, ಎಂಡೊಮೆಟ್ರಿಯೊಸಿಸ್ ಅಥವಾ ಫೈಬ್ರಾಯ್ಡ್‌ಗಳು ಈ ಬದಲಾವಣೆಗಳಿಗೆ ಕಾರಣವಾಗಬಹುದು.
ಗಮನಿಸಬೇಕಾದ ಕೆಲವು ಲಕ್ಷಣಗಳು:
ಭಾರೀ ರಕ್ತಸ್ರಾವ: ಎರಡು ಗಂಟೆಗಿಂತ ಕಡಿಮೆ ಅವಧಿಯಲ್ಲಿ ಪ್ಯಾಡ್ ತುಂಬುವುದು, ದೊಡ್ಡ ಹೆಪ್ಪುಗಟ್ಟುವಿಕೆ ರಕ್ತ ಕಾಣಿಸುವುದು ಫೈಬ್ರಾಯ್ಡ್‌ಗಳು ಅಥವಾ ಹಾರ್ಮೋನು ಅಸಮತೋಲನದ ಸೂಚನೆ.
ಅನಿಯಮಿತ ಋತುಚಕ್ರ: 21 ದಿನಕ್ಕಿಂತ ಕಡಿಮೆ ಅಥವಾ 35 ದಿನಕ್ಕಿಂತ ಹೆಚ್ಚು ಅವಧಿಯಲ್ಲಿ ಬರುವುದು – ಪಿಸಿಓಎಸ್, ಥೈರಾಯ್ಡ್ ಸಮಸ್ಯೆ ಅಥವಾ ಹಾರ್ಮೋನು ಮಟ್ಟದ ವ್ಯತ್ಯಾಸದ ಸೂಚನೆ.
ಋತುಚಕ್ರದ ಕೊರತೆ: ಹಲವು ತಿಂಗಳುಗಳ ಕಾಲ ಮುಟ್ಟಾಗದಿರುವುದು – ಪಿಸಿಓಎಸ್ ಅಥವಾ ಅಕಾಲಿಕ ಋತುಬಂಧಕ್ಕೆ ಕಾರಣವಾಗಿರಬಹುದು.
ತೀವ್ರ ಹೊಟ್ಟೆ ನೋವು: ಸಾಮಾನ್ಯ ಸೆಳೆತಕ್ಕಿಂತ ಹೆಚ್ಚು ತೀವ್ರ ನೋವು ಗಂಭೀರ ಸಮಸ್ಯೆಯ ಸೂಚನೆ.
ಅಪರೂಪದ ಅಥವಾ ಕಡಿಮೆ ರಕ್ತಸ್ರಾವ: ಹಾರ್ಮೋನು ಅಸಮತೋಲನ ಅಥವಾ ಕಡಿಮೆ ಈಸ್ಟ್ರೊಜೆನ್ ಮಟ್ಟಗಳ ಕಾರಣವಾಗಿರಬಹುದು.
ಬಣ್ಣದ ಬದಲಾವಣೆ: ನಿರಂತರ ಗಾಢ ಕಂದು ಅಥವಾ ಕಪ್ಪು ರಕ್ತ ಸೋಂಕು ಅಥವಾ ಒಳಸ್ರಾವ ಸಮಸ್ಯೆಯ ಸೂಚನೆ.
ಮುಟ್ಟಿನ ವೇಳೆ ಉಂಟಾಗುವ ಅಸಾಮಾನ್ಯ ಬದಲಾವಣೆಗಳನ್ನು ನಿರ್ಲಕ್ಷಿಸದೇ, ತಕ್ಷಣ ವೈದ್ಯಕೀಯ ಸಲಹೆ ಪಡೆಯುವುದು ಅಗತ್ಯ. ಸಮಯಕ್ಕೆ ಸರಿಯಾದ ನಿರ್ವಹಣೆ, ಜೀವನಶೈಲಿಯಲ್ಲಿ ಸಮತೋಲನ ಹಾಗೂ ನಿಯಮಿತ ತಪಾಸಣೆಗಳು ದೀರ್ಘಕಾಲದ ಆರೋಗ್ಯ ರಕ್ಷಣೆಗೆ ಸಹಾಯಕವಾಗುತ್ತವೆ.