ಹೊಸದಿಗಂತ ಮಂಗಳೂರು:
ಅಪರಿಚಿತ ಮಹಿಳೆಯರಿಬ್ಬರು ಏಕಾಏಕಿ ಮನೆಯೊಂದಕ್ಕೆ ನುಗ್ಗಿ ಆತಂಕ ಸೃಷ್ಟಿಸಿದ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಈ ಸಂಬಂಧ ಎನ್ನಲಾದ ವಿಡಿಯೋವೊಂದು ವೈರಲ್ ಆಗುತ್ತಿದೆ.
ಬ್ರಹ್ಮಾವರ ತಾಲೂಕು ವಾರಂಬಳ್ಳಿ ಗ್ರಾಮದ, ಉಪ್ಪಿನಕೋಟೆ ಎಂಬಲ್ಲಿರುವ ಮನೆಯೊಂದಕ್ಕೆ ಬಂದ ಮಹಿಳೆಯರಿಬ್ಬರು ತಾವು ಮುಂಬೈಯವರು, ಈಗ ಹಂಪನಕಟ್ಟೆಯಲ್ಲಿ ಇದ್ದೇವೆ ಎನ್ನುತ್ತಾ ಮನೆಯೊಳಗೆ ಬರಲು ಪ್ರಯತ್ನಿಸಿದ್ದಾರೆ.
ಮನೆಯೊಡತಿ ಅವರನ್ನು ತಡೆಯುವ ಪ್ರಯತ್ನ ಮಾಡಿದರೂ ಲೆಕ್ಕಿಸದ ಮಹಿಳೆಯರು ಮನೆಯೊಳಕ್ಕೆ ನುಗ್ಗಿದ್ದಾರಲ್ಲದೆ. ಮನೆಯಲ್ಲಿದ್ದ ಒಂದು ವರ್ಷ ಪ್ರಾಯದ ಮಗುವನ್ನು ಎತ್ತಿಕೊಂಡು ತಮ್ಮ ಕೈಯಲ್ಲಿದ್ದ ಮೊಬೈಲ್ ತೋರಿಸುತ್ತಾ ಹೊರಗಡೆ ಕರೆದುಕೊಂಡು ಹೋಗಿದ್ದಾರೆ. ಆತಂಕಗೊಂಡ ಮನೆಯೊಡತಿ ಮಗುವನ್ನು ವಾಪಸ್ ಕರೆತಂದಿದ್ದು, ಇಷ್ಟರಲ್ಲಿ ಆಕೆಯ ಅಣ್ಣ ಆಗಮಿಸಿದ್ದನ್ನು ಕಂಡ ಮಹಿಳೆಯರು ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಈ ನಿಗೂಢ ಘಟನೆ ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದ್ದು, ಇವರಾರು? ಯಾವ ಊರು? ಎಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ. ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ