ಇತ್ತೀಚಿನ ದಿನಗಳಲ್ಲಿ ಥೈರಾಯ್ಡ್ ಸಮಸ್ಯೆ ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುತ್ತಿದ್ದು, ಇದೊಂದು ಸಾಮಾನ್ಯವಾದ ಎಂಡೋಕ್ರೈನ್ ಕಾಯಿಲೆಯಾಗಿ ಪರಿಗಣಿಸಲಾಗಿದೆ. ಆಧುನಿಕ ಜೀವನಶೈಲಿ, ಮಾನಸಿಕ ಒತ್ತಡ, ಹಾರ್ಮೋನು ಬದಲಾವಣೆ ಸೇರಿದಂತೆ ಹಲವು ಕಾರಣಗಳಿಂದ ಮಹಿಳೆಯರಲ್ಲಿ ಥೈರಾಯ್ಡ್ ತೊಂದರೆ ಹೆಚ್ಚುತ್ತಿದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
ಥೈರಾಯ್ಡ್ ಗ್ರಂಥಿಯು ಕಂಠದ ಮುಂಭಾಗದಲ್ಲಿದ್ದು, ದೇಹದ ಮೆಟಬಾಲಿಸಂ ನಿಯಂತ್ರಣಕ್ಕೆ ಕಾರಣವಾಗುತ್ತದೆ. ಈ ಗ್ರಂಥಿಯಲ್ಲಿ ತೊಡಕಾಗುವುದರಿಂದ ‘ಹೈಪೋಥೈರಾಯ್ಡಿಸಮ್’ ಅಥವಾ ‘ಹೈಪರ್‌ಥೈರಾಯ್ಡಿಸಮ್’ ಎಂಬ ಎರಡು ರೀತಿಯ ಸಮಸ್ಯೆಗಳು ಉಂಟಾಗಬಹುದು. ಮಹಿಳೆಯರು ವಿಶೇಷವಾಗಿ ಹಾರ್ಮೋನಲ್ ಬದಲಾವಣೆಗಳ ಹಂತಗಳಲ್ಲಿ ಉದಾಹರಣೆಗೆ ಗರ್ಭಧಾರಣೆ, ಪ್ರಸವ, ಮೆನುಪಾಸ್ ವೇಳೆ ಈ ಸಮಸ್ಯೆಗೆ ಹೆಚ್ಚು ಒಳಗಾಗುತ್ತಾರೆ.
ಲಕ್ಷಣಗಳು:
ಹೈಪೋಥೈರಾಯ್ಡಿಸಮ್ ಇದ್ದರೆ ಆಯಾಸ, ತೂಕ ಹೆಚ್ಚಾಗುವುದು, ಶೀತ ಅಸಹಿಷ್ಣುತೆ, ಒಣ ಚರ್ಮ, ಮಲಬದ್ಧತೆ ಮತ್ತು ಖಿನ್ನತೆ, ತಲೆ ನೋವು, ತೀವ್ರ ದಣಿವು ಇತ್ಯಾದಿ. ಹೈಪರ್‌ಥೈರಾಯ್ಡಿಸಮ್‌ನಲ್ಲಿ ತೂಕ ಕಡಿಮೆಯಾಗುವುದು, ಹೃದಯ ಬಡಿತ ಹೆಚ್ಚಾಗುವುದು, ನಿದ್ದೆ ಕೊರತೆ, ಅತಿಯಾಗಿ ಬೆವರುವುದು, ಗಾಬರಿಗೊಳಿಸುವಿಕೆಯಂತಹ ಲಕ್ಷಣಗಳು ಕಂಡುಬರುತ್ತವೆ.
ಚಿಕಿತ್ಸೆ:
ಥೈರಾಯ್ಡ್ ಸಮಸ್ಯೆಯನ್ನು ನಿರ್ಧರಿಸಲು ‘ಟಿಎಸ್ಎಚ್’, ‘ಟಿಐ3’, ‘ಟಿಐ4’ ಪರೀಕ್ಷೆಗಳನ್ನು ಮಾಡಿಸಲಾಗುತ್ತದೆ. ಹೈಪೋಥೈರಾಯ್ಡ್ ಚಿಕಿತ್ಸೆಗೆ ಲೆವೋಥೈರೊಕ್ಸಿನ್ ಔಷಧಿ ನೀಡಲಾಗುತ್ತದೆ, ಹೈಪರ್‌ಥೈರಾಯ್ಡ್‌ಗಳಿಗೆ ಔಷಧಿ, ಕಿರಣ ಚಿಕಿತ್ಸೆ ಅಥವಾ ಕೆಲವೊಮ್ಮೆ ಶಸ್ತ್ರಚಿಕಿತ್ಸೆಯ ಅಗತ್ಯವೂ ಇರಬಹುದು. ಆಹಾರದಲ್ಲಿ ಅಯೋಡಿನ್ ಅಂಶದ ಒಳಗೊಳ್ಳುವಿಕೆ, ಮಾನಸಿಕ ಶಾಂತಿ ಮತ್ತು ನಿಯಮಿತ ವ್ಯಾಯಾಮದಿಂದ ಥೈರಾಯ್ಡ್ ನಿಯಂತ್ರಣ ಸಾಧ್ಯವಾಗಿದೆ.
ಆಹಾರ:
ಪ್ರತಿದಿನ ಸೇಬು, ದಾಳಿಂಬೆ, ಸೀಬೆ, ಬಾಳೆಹಣ್ಣು, ಕಿತ್ತಲೆ ಹೀಗೆ ವಿವಿಧ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಬೇಕು. ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಅಂದರೆ ಮಜ್ಜಿಗೆ, ಮೊಸರು ಮತ್ತು ತುಪ್ಪವನ್ನು ನಿಯಮಿತವಾಗಿ ಹಿತಮಿತವಾಗಿ ಸೇವಿಸಬೇಕು. ಅಗಸೆ ಬೀಜ, ಸೂರ್ಯಕಾಂತಿ ಬೀಜ, ಒಣ ಹಣ್ಣುಗಳು, ಕಾಲಕಾಲಕ್ಕೆ ಸಿಗುವ ತಾಜಾ ಹಸಿರು ಸೊಪ್ಪುಗಳು, ಧಾನ್ಯಗಳು, ಕಾಳುಗಳು, ಸಾರ್ಡಿನ್,ಸಾಲ್ಮನ್ ಮೀನು, ಮೊಟ್ಟೆ ಮತ್ತು ಮಾಂಸಾಹಾರಿಗಳಾಗಿದ್ದರೆ ಕೋಳಿಯ ಮಾಂಸವನ್ನು ಸೇವಿಸಿದರೆ, ಥೈರಾಯ್ಡ್ ಸಮಸ್ಯೆ ಬಾರದಂತೆ ತಡೆಯಬಹುದು.
ಸ್ಥಿರ ಚಿಕಿತ್ಸೆ ಮತ್ತು ಆರೋಗ್ಯಕರ ಜೀವನಶೈಲಿಯಿಂದ ಮಹಿಳೆಯರು ಥೈರಾಯ್ಡ್ ಸಮಸ್ಯೆಗಳಿಂದ ದೂರವಿರಬಹುದು. (Disclaimer: ಈ ಲೇಖನವು ಸಾರ್ವಜನಿಕ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.)