ಹೊಸದಿಗಂತ ವರದಿ ಮಂಗಳೂರು:
ಸನಾತನ ಸಂಸ್ಕೃತಿಯ ರಕ್ಷಣೆಯಲ್ಲಿ ಮಹಿಳೆಯರ ಪಾತ್ರ ಅತ್ಯಂತ ಮಹತ್ತರವಾದುದು. ಮಾತೃತ್ವ ಗುಣ ಸ್ತ್ರೀಯಲ್ಲಿ ಸಹಜವಾಗಿಯೇ ಅಡಕವಾಗಿರುತ್ತದೆ. ಅದನ್ನು ಕಾಪಿಟ್ಟುಕೊಳ್ಳುವುದರೊಂದಿಗೆ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸುವ, ಸಮಾಜಕಟ್ಟುವ ಕಾರ್ಯಕ್ಕೆ ಪ್ರತಿಯೊಬ್ಬ ಮಹಿಳೆಯೂ ವಿಶೇಷ ಆದ್ಯತೆ ನೀಡಬೇಕು ಎಂದು ವಕೀಲೆ ಕ್ಷಮಾ ನರಗುಂದ ಕರೆ ನೀಡಿದರು.
ರಾಷ್ಟ್ರೀಯ ಚಿಂತನೆ, ಸಾಮಾಜಿಕ ಸಾಮರಸ್ಯ, ಮಹಿಳಾ ಸುರಕ್ಷೆ ಇತ್ಯಾದಿ ವಿಚಾರಗಳನ್ನಿಟ್ಟುಕೊಂಡು ಮಂಗಳೂರಿನ ಕೇಶವ ಸ್ಮೃತಿ ಸಂವರ್ಧನ ಸಮಿತಿ ವತಿಯಿಂದ ಭಾನುವಾರ ನಗರದ ಪ್ರತಾಪನಗರದಲ್ಲಿರುವ ಸಂಘನಿಕೇತನದಲ್ಲಿ ಆಯೋಜಿಸಿದ್ದ ನಾರೀ ಶಕ್ತಿ ಸಂಗಮ ‘ಮಹಿಳಾ ಸಮ್ಮೇಳನ’ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಗೆ ವಿಶೇಷವಾದ ಸ್ಥಾನವಿದೆ. ಇಲ್ಲಿ, ಹೆಣ್ಣು ಮತ್ತು ಗಂಡನ್ನು ಪ್ರತ್ಯೇಕವಾಗಿ ನೋಡುವುದಿಲ್ಲ.ಬೇರೆ ಬೇರೆ ಅನ್ನುವ ಮನೋಭಾವವೇ ಇಲ್ಲಿಲ್ಲ.ಅರ್ಧ ನಾರೀಶ್ವರನನ್ನು ಯಾವ ರೀತಿಯಾಗಿ ಪೂಜ್ಯ ಮನೋಭಾವದಿಂದ ಕಾಣುತ್ತೇವೆಯೋ ಅದೇ ರೀತಿ ಇಲ್ಲಿಯೂ ಪಾಲಿಸಲಾಗುತ್ತದೆ. ಸ್ತ್ರೀ ಪುರುಷರ ನಡುವೆ ಪರಸ್ಪರ ಅವಲಂಬನೆಯೇ ಪ್ರಾಮುಖ್ಯವಾದುದು. ಸಮಾಜವನ್ನು ಸುಲಲಿತವಾಗಿ ಮುನ್ನೆಡೆಸುವಲ್ಲಿ ಸ್ತ್ರೀ ಪುರುಷರನ್ನು ಸಮತೋಲನದ ದೃಷ್ಟಿಯಿಂದ ನೋಡಬೇಕೇ ಹೊರತು ಸಮಾನತೆಯ ದೃಷ್ಟಿಯಿಂದಲ್ಲ ಎಂದವರು ಹೇಳಿದರು.
ಸ್ತ್ರೀ ಪುರುಷರೆಂಬ ಪ್ರತ್ಯೇಕತೆಯ ಮನೋಭಾವವಿಲ್ಲದೆ ಪರಸ್ಪರ ಅವಲಂಬನೆಯೊಂದಿಗೆ ಸಮಾಜವನ್ನು ಜೊತೆಯಾಗಿ ಮುನ್ನಡೆಸುವ ಮತ್ತು ಸನಾತನ ಸಂಸ್ಕೃತಿಯನ್ನು ಮುನ್ನಡೆಸಿಕೊಂಡು ಹೋಗುವಲ್ಲಿ ನಮ್ಮನ್ನೆಲ್ಲಾ ಎಚ್ಚರಿಸುವ ನೆಲೆಯಲ್ಲಿ ಈ ನಾರೀಶಕ್ತಿ ಸಮ್ಮೇಳನವನ್ನು ಆಯೋಜಿಸಿರುವುದು ಅರ್ಥಪೂರ್ಣವಾಗಿದೆ ಎಂದು ಕ್ಷಮಾ ನರಗುಂದ ಹೇಳಿದರು.
ಆಶೀರ್ವಚನ ನೀಡಿದ ಮಾತಾ ಅಮೃತಾನಂದಮಯಿ ಮಠದ ಮಠಾಧಿಪತಿ ಮಂಗಳಾಮೃತ ಪ್ರಾಣ ಅವರು, ದೇಶಾದ್ಯಂತ ನಾರೀಶಕ್ತಿ ಸಂಗಮ ಕಾರ್ಯಕ್ರಮ ನಡೆಯುವ ಮೂಲಕ ಸನಾತನ ಸಂಸ್ಕೃತಿಗೆ ಮತ್ತಷ್ಟು ಮೆರುಗು ನೀಡಲಾಗುತ್ತಿದೆ. ನಮ್ಮ ಸಂಸ್ಕೃತಿ ಮತ್ತಷ್ಟು ಗಟ್ಟಿಯಾಗಿರಲು ಮಹಿಳಾ ಶಕ್ತಿಯೂ ಪ್ರಮುಖ ಕಾರಣ. ಭಾರತದಲ್ಲಿ ಮಾತೃಶಕ್ತಿ ಇನ್ನಷ್ಟು ಎತ್ತರಕ್ಕೆ ಏರಲಿದೆ ಎಂದರು.
ಅಖಿಲಭಾರತ ಶಿಕ್ಷಾ ಸಂಸ್ಥಾನ ವಿದ್ಯಾಭಾರತಿ ಇದರ ಸಹ ಕಾರ್ಯದರ್ಶಿ ಪ್ರೊ.ನಂದಿನಿ ಲಕ್ಷ್ಮೀಕಾಂತ, ನಾರೀಶಕ್ತಿ ಸಂಗಮ ಸ್ವಾಗತ ಸಮಿತಿ ಅಧ್ಯಕ್ಷೆ ಭಾರತಿ ಜೀವರಾಜ ಸೊರಕೆ, ಚಿಂತಕಿ ಕವಿತಾ ಶಾಸ್ತ್ರಿ ಮತ್ತಿತರರು ಉಪಸ್ಥಿತರಿದ್ದರು.
ಸಮ್ಮೇಳನ ಜಿಲ್ಲಾ ಸಂಚಾಲಿಕಾ ನಮಿತಾ ಶ್ಯಾಮ್ ಸ್ವಾಗತಿಸಿ, ವಿಟ್ಲ ತಾಲೂಕು ಪ್ರಮುಖ್ ಸುಷ್ಮಾ ವಂದಿಸಿದರು. ಸಮ್ಮೇಳನದ ಸಂಚಾಲಿಕಾ ಸುಭದ್ರಾ ರಾವ್ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ವಿವಿಧ ವಿಷಯಗಳ ಕುರಿತಂತೆ ಚರ್ಚೆ, ಸಂವಾದ ಕಾರ್ಯಕ್ರಮ ನಡೆಯಿತು. ಜಿಲ್ಲೆಯ ವಿವಿಧ ವಿಭಾಗಗಳ 700ಕ್ಕೂ ಅಧಿಕ ಮಹಿಳೆಯರು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು.