ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದ ವಿಷಯ ಮತ್ತೆ ಚರ್ಚೆಗೆ ಬಂದಿದೆ. ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ಕಲ್ಪಿಸುವ ಸೆಪ್ಟೆಂಬರ್ 2018 ರ ತೀರ್ಪು ಮರುಪರಿಶೀಲನಾ ಅರ್ಜಿಯನ್ನ ಸುಪ್ರೀಂ ಕೋರ್ಟ್ ಅಂಗೀಕರಿಸಿದೆ.
9 ನ್ಯಾಯಮೂರ್ತಿಗಳ ಪ್ರತ್ಯೇಕ ಪೀಠವು ಏಪ್ರಿಲ್ 7 ರಿಂದ ಅರ್ಜಿ ವಿಚಾರಣೆ ನಡೆಸಲಿದ್ದು, ಏಪ್ರಿಲ್ 22 ರಂದು ಮುಕ್ತಾಯಗೊಳಿಸಲು ಉದ್ದೇಶಿಸಲಾಗಿದೆ. ಸುಪ್ರೀಂ ಕೋರ್ಟ್ ಸಿಜೆಐ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜಾಯ್ಮಲ್ಯ ಬಾಗ್ಚಿ ಮತ್ತು ವಿಪುಲ್ ಎಂ ಪಾಂಚೋಲಿ ಅವರಿದ್ದ ನ್ಯಾಯಪೀಠವು ಈ ತೀರ್ಮಾನ ಪ್ರಕಟಿಸಿದೆ. 9 ನ್ಯಾಯಾಧೀಶರ ಪೀಠ ಸಂಯೋಜನೆಯನ್ನು ಸಿಜೆಐ ಆಡಳಿತಾತ್ಮಕ ಆದೇಶದ ಮೂಲಕ ಪ್ರತ್ಯೇಕವಾಗಿ ಘೋಷಿಸಲಾಗುತ್ತದೆ.
ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರಿಗೆ ಪ್ರವೇಶ ಕಲ್ಪಿಸುವ ತೀರ್ಪನ್ನು ಬೆಂಬಲಿಸುವ ಪಕ್ಷಗಳು ಏಪ್ರಿಲ್ 7 ರಿಂದ ಏಪ್ರಿಲ್ 9 ರ ವರೆಗೆ ಹಾಗೂ ವಿರೋಧಿಸುವ ಪಕ್ಷಗಳು ಏಪ್ರಿಲ್ 14 ರಿಂದ ಏಪ್ರಿಲ್ 16 ರ ವರೆಗೆ ವಾದ ಮಂಡಿಸಲು ದಿನಾಂಕ ನಿಗದಿಪಡಿಸಲಾಗಿದೆ. ಏಪ್ರಿಲ್ 21 ರಂದು ಮರುಪ್ರಶ್ನೆ ಸಲ್ಲಿಕೆಗಳು ನಡೆಯಲಿದ್ದು, ಏಪ್ರಿಲ್ 22 ರಂದು ವಿಚಾರಣೆ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ.



