ಹೊಸದಿಗಂತ ವರದಿ,ಬೆಳಗಾವಿ:
ಇಲ್ಲಿನ ಸುವರ್ಣ ವಿಧಾನಸೌಧ ಬಳಿಯ ಪ್ರತಿಭಟನಾ ಟೆಂಟ್ ನಲ್ಲಿ ಪ್ರತಿನಿತ್ಯ ಮೊಳಗುತ್ತಿದ್ದ ಘೋಷಣೆಗಳು ಗುರುವಾರ ಒಂದಿಷ್ಟು ವಿಭಿನ್ನವಾಗಿದ್ದವು.
ಕಳೆದ ಒಂಬತ್ತು ದಿನಗಳಿಂದ ಕೇಳಲು ಸಿಕ್ಕಿದ್ದ ‘ಬೇಕೇ ಬೇಕು ನ್ಯಾಯಾ ಬೇಕು’ ಸೇರಿದಂತೆ ನಾನಾ ಧಿಕ್ಕಾರಗಳ ಬದಲು ಗುರುವಾರ ‘ ನಿತ್ಯ ದುಡಿ, ಸತ್ಯ ನುಡಿ, ಸ್ವಲ್ಪ ಕುಡಿ, ಮನೆಗೆ ನಡಿ” ಘೋಷಣೆಗಳು ಮೊಳಗಿದ್ದು ಗಮನ ಸೆಳೆಯಿತು.
ಕರ್ನಾಟಕ ಮದ್ಯಪಾನ ಪ್ರೀಯರ ಹೋರಾಟಗಾರ ಸಂಘದ ಪದಾಧಿಕಾರಿಗಳು ಸುಮಾರು 20 ಬೇಡಿಕೆಗಳನ್ನು ಈಡೇರಿಸುಂತೆ ಆಗ್ರಹಿಸಿ ಗುರುವಾರ ಇಲ್ಲಿನ ಸುವರ್ಣ ಗಾರ್ಡನ್ ಬಳಿ ಪ್ರತಿಭಟನೆ ನಡೆಸಿ ಕಾರ್ಮಿಕ ಸಚಿವ ಸಂತೋಷ ಲಾಡ್ ಅವರಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಲು ಆಗಮಿಸಿದ್ದ ಸಂತೋಷ ಲಾಡ್ ಅವರೂ ಕೂಡ ಮುಗುಳ್ನಗೆ ನಗುತ್ತಲೇ ಸಂಘದ ಬೇಡಿಕೆಗಳನ್ನು ಆಲಿಸಿದರು.
ಕಾರ್ಮಿಕ ಮಂಡಳಿಯ ಪ್ರಕಾರ ಮದ್ಯಪಾನ ಪ್ರೀಯರ ಕಲ್ಯಾಣ ನಿಧಿ ಸ್ಥಾಪಿಸಬೇಕು, ವಾರ್ಷಿಕ ಆದಾಯದಲ್ಲಿ ಶೇ.10 ರಷ್ಟು ಕಲ್ಯಾಣ ನಿಧಿಗೆ ವರ್ಗಾಯಿಸಬೇಕು, ಮದ್ಯಪಾನ ಪ್ರೀಯರ ಪ್ರತಿಭಾವಂತ ಮಕ್ಕಳಿಗೆ ಸರಕಾರದಿಂದ ಮಾಸಾಶನ ನೀಡಬೇಕೆಂಬು ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದ್ದು ವಿಶೇಷವಾಗಿತ್ತು.
ಮದ್ಯಪಾನ ಪ್ರೀಯರಿಗೆ ನಿಗಮ ಮಂಡಳಿ ಸ್ಥಾಪನೆ ಮಾಡಬೇಕು ಮತ್ತು ಇತರೆ ಸಾಲ ಸೌಲಭ್ಯ, ವಸತಿ ಸೌಲಭ್ಯವನ್ನು ಸರಕಾರವೇ ಮಾಡಿಕೊಡಬೇಕು ಹಾಗೂ ಮದ್ಯಪಾನ ಸೇವಿಸಿ ವ್ಯಕ್ತಿ ಮೃತಪಟ್ಟರೆ ಅವರ ಕುಟುಂಬಕ್ಕೆ ಸರಕಾರ 10 ಲಕ್ಷ ಪರಿಹಾರ ಹಾಗೂ ಕುಟುಂಬದ ಸದಸ್ಯರ ಮದುವೆ ಸಮಾರಂಭಕ್ಕೆ 2 ಲಕ್ಷ ರೂ. ನೀಡಬೇಕೆಂದು ಆಗ್ರಹಿಸಿದರು.
ಸರಕಾರ ಮದ್ಯದ ದರ ಹೆಚ್ಚಿಸುವ ಸಂದರ್ಭದಲ್ಲಿ ಸರಕಾರ ಮದ್ಯಪಾನ ಸಂಘದ ಸದಸ್ಯರ ವಿಶ್ವಾಸಕ್ಕೆ ತೆಗೆದುಕೊಂಡು ದರ ಹೆಚ್ಚಳ ಮಾಡಬೇಕು ಹಾಗೂ ಬಾರ್ ಮತ್ತು ರೆಸ್ಟೋರೆಂಟ್ ಗಳಲ್ಲಿ ಗುಣಮಟ್ಟದ ಆಹಾರವನ್ನು ಒದಗಿಸಬೇಕು ಮತ್ತು ಇಲ್ಲಿನ ಶೌಚಾಲಯ ಶುಚಿಯಾಗಿ ಇಟ್ಟುಕೊಳ್ಳುವಂತೆ ಸಂಬಂಧ ಪಟ್ಟ ಅಬಕಾರಿ ಅಧಿಕಾರಿಗಳಿಗೆ ಸೂಚನೆ ನೀಡಬೇಕು. ಮದ್ಯಮದ ಬಾಟಲ್ ಎಂಆರ್ ಪಿ ದರ ತೆಗೆದುಕೊಳ್ಳಬೇಕು ಎಂದು ಸರಕಾರ ಆದೇಶ ಹೊರಡಿಸಬೇಕೆಂಬುದು ಸಂಘದ ಹಕ್ಕೊತ್ತಾಯಗಳಾಗಿದ್ದವು.
ಮದ್ಯಪಾನ ಸಂಘದ ಅಧ್ಯಕ್ಷ ವೆಂಕಟೇಶ ಗೌಡ ಬೋರೆಹಳ್ಳಿ, ರಾಮಸ್ವಾಮಿ, ಮೋಹನ ನಾಯಕ, ಎ.ಎಂ.ಸಿದ್ದೇಶ ಉಪಸ್ಥಿತರಿದ್ದರು.