ಹೊಸ ದಿಗಂತ ವರದಿ, ದಾವಣಗೆರೆ:
ಹೊಸ ವರ್ಷದ ಹಿನ್ನೆಲೆಯಲ್ಲಿ ಬೂಟಾಟಿಕೆ ಮಾಡಲು ನಾನು ಬರ ಅಧ್ಯಯನ ಪ್ರವಾಸ ಕೈಗೊಂಡಿಲ್ಲ. ರೈತರ ಬಗೆಗಿನ ಕಾಳಜಿಯಂದ ಬರ ಅಧ್ಯಯನ ಮಾಡುತ್ತಿದ್ದು, ರೈತರು ಎದುರಿಸುತ್ತಿರುವ ಸಂಕಷ್ಟದ ಬಗ್ಗೆ ಸರ್ಕಾರದ ಗಮನ ಸೆಳೆದು ನೊಂದವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಬರಗಾಲದಿಂದ ಮಳೆ ಕೈಕೊಟ್ಟು ಬೆಳೆ ನಷ್ಟಕ್ಕೊಳಗಾಗಿರುವ ತಾಲೂಕಿನ ಜಮ್ಮಾಪುರ ಗ್ರಾಮದ ದಲಿತ ರೈತ ಕುಟುಂಬದ ಮೆಕ್ಕೆಜೋಳ ಜಮೀನಿಗೆ ಸೋಮವಾರ ಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರಲ್ಲಿ ಲಿಂಗಾಯರು, ದಲಿತರು, ಹಿಂದುಳಿದವರು ಹೀಗೆ ಎಲ್ಲಾ ಜಾತಿ, ಧರ್ಮೀಯರೂ ಇದ್ದಾರೆ. ದಲಿತ ಕುಟುಂಬದ ರೈತರ ಜಮೀನಿಗೆ ಭೇಟಿ ನೀಡಿರುವ ವೇಳೆ ಬಡ ರೈತ ದಂಪತಿ ಕಣ್ಣೀರು ನಮ್ಮ ಮನಸ್ಸಿಗೆ ನೋವುಂಟು ಮಾಡುತ್ತಿದೆ. ಸರ್ಕಾರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ, ಬರದ ಹೊಡೆತದಿಂದ ತತ್ತರಿಸಿರುವ ರೈತರಿಗೆ ಮೊದಲು ಪರಿಹಾರ ನೀಡುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಲ್ಪಸಂಖ್ಯಾತರ ಓಲೈಕೆ ಶುರು ಮಾಡಿದ್ದಾರೆ. ಅಲ್ಪಸಂಖ್ಯಾತರಿಗೆ ೧೦ ಸಾವಿರ ಕೋಟಿ ರೂ. ಅನುದಾನ ನೀಡುವ ಘೋಷಣೆ ಮಾಡಿದ್ದಾರೆ. ಹೀಗೆ ಸಾವಿರಾರು ಕೋಟಿ ರೂ. ಅನುದಾನ ಘೋಷಿಸುತ್ತಿರುವ ಸಿದ್ದರಾಮಯ್ಯ ರೈತರ ಬಗ್ಗೆಯೂ ಗಮನ ಹರಿಸಬೇಕು. ಅನ್ನದಾತರ ಸಂಕಷ್ಟಕ್ಕೂ ಸ್ಪಂದಿಸಬೇಕು. ಸಂಕಷ್ಟಕ್ಕೆ ತುತ್ತಾದ ರೈತರಿಗೆ ಬೆಳೆ ಹಾನಿ ಪರಿಹಾರದ ಬಗ್ಗೆ ಕೇಳಿದಾಗ ಮಾತ್ರ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುವುದಲ್ಲ ಎಂದು ಅವರು ಟೀಕಿಸಿದರು.
ಬರಗಾಲದಿಂದ ರಾಜ್ಯದಲ್ಲಿ ಲಕ್ಷಾಂತರ ರೈತ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಆದ್ಯತೆ ಕೇವಲ ಅಲ್ಪಸಂಖ್ಯಾತರ ಕಡೆಗೆ ಮಾತ್ರ ಇದೆ. ರೈತರ ಬಳಿ ನಾವು ಹೋದಾಗ ಅನ್ನದಾತರ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ, ಬೆಳೆ ಕಳೆದುಕೊಂಡು ಕಣ್ಣೀರು ಹಾಕುವುದನ್ನು ನೋಡುತ್ತಿದ್ದೇವೆ. ಬರೀ ರೈತರ ಬಗ್ಗೆ ಮಾತನಾಡದೆ, ಸಿಎಂ ಸಿದ್ದರಾಮಯ್ಯ ನುಡಿದಂತೆ ನಡೆಯಬೇಕು. ಪ್ರಧಾನಿ ನರೇಂದ್ರ ಮೋದಿ ಮಾಡಿದಂತೆ ನೇರವಾಗಿ ರೈತರ ಖಾತೆಗಳಿಗೆ ಬರ ಪರಿಹಾರ, ಬೆಳೆ ನಷ್ಟ ಪರಿಹಾರ ಜಮಾ ಮಾಡಬೇಕು ಎಂದು ಅವರು ಸಲಹೆ ನೀಡಿದರು.