ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ನಗರದ ವಿದ್ಯಾರಣ್ಯಪುರ ವ್ಯಾಪ್ತಿಯಲ್ಲಿ ನಡೆದ ಭಾರೀ ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಉದ್ಯಮಿ ಮನೆಯಲ್ಲಿ ಕೆಲಸ ಮಾಡುತ್ತಿದ್ದವರೇ ಕೃತ್ಯದ ಹಿಂದಿದ್ದಾರೆ ಎಂಬುದು ಬೆಳಕಿಗೆ ಬಂದಿದೆ. ಲಕ್ಷ್ಮೀಪುರ ಕ್ರಾಸ್‌ನ ಡೊನಾಟಾ ಕೌಂಟಿ ವಿಲ್ಲಾದಲ್ಲಿ ಡಿಸೆಂಬರ್ 24ರಂದು ನಡೆದ ಚಿನ್ನ, ಬೆಳ್ಳಿ ಮತ್ತು ನಗದು ಕಳ್ಳತನ ಸಂಬಂಧ ನಾಲ್ವರನ್ನು ಬಂಧಿಸಲಾಗಿದೆ.
ಬಂಧಿತರನ್ನು ಮಂಜುನಾಥ, ಚಂದನ್, ನರೇಂದ್ರ ಮತ್ತು ಮಂಜಿತ್ ಎಂದು ಗುರುತಿಸಲಾಗಿದ್ದು, ಇವರಿಂದ ಸುಮಾರು 550 ಗ್ರಾಂ ಚಿನ್ನಾಭರಣ, 3 ಕೆಜಿ ಬೆಳ್ಳಿ ಹಾಗೂ 3 ಲಕ್ಷ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳಲ್ಲಿ ಮಂಜಿತ್ ಉದ್ಯಮಿ ಮನೆಯ ಕೆಲಸದಾಳು ಆಗಿದ್ದರೆ, ನರೇಂದ್ರ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಈ ಇಬ್ಬರೂ ಸೇರಿ ಮನೆ ಕಳ್ಳತನಕ್ಕೆ ಸಂಚು ರೂಪಿಸಿದ್ದು, ನಂತರ ಸ್ನೇಹಿತರನ್ನು ತಂಡಕ್ಕೆ ಸೇರಿಸಿಕೊಂಡಿದ್ದರು.
ಇದನ್ನೂ ಓದಿ: Rice series 24 | ಸಖತ್ ಟೇಸ್ಟಿ ಮಟರ್ ಬಿರಿಯಾನಿ ಮಾಡಿ ನೋಡಿ! ರೆಸಿಪಿ ಇಲ್ಲಿದೆ
ಮೂರು ತಿಂಗಳಿಗೂ ಹೆಚ್ಚು ಕಾಲ ಯೋಜನೆ ರೂಪಿಸಿಕೊಂಡಿದ್ದ ಆರೋಪಿಗಳು, ಉದ್ಯಮಿ ಕುಟುಂಬ ಕ್ರಿಸ್‌ಮಸ್ ರಜೆಯ ಹಿನ್ನೆಲೆ ಪ್ರವಾಸಕ್ಕೆ ತೆರಳಿದ್ದ ಸಮಯವನ್ನು ಬಳಸಿಕೊಂಡು ಕಳ್ಳತನ ನಡೆಸಿದ್ದಾರೆ. ಕೃತ್ಯದ ಬಳಿಕ ಆರೋಪಿಗಳು ಧರ್ಮಸ್ಥಳಕ್ಕೆ ತೆರಳಿ, ಬಳಿಕ ಕದ್ದ ಹಣದಲ್ಲೇ ಪ್ರವಾಸ ನಡೆಸಿದ ಮಾಹಿತಿಯೂ ತನಿಖೆಯಲ್ಲಿ ಹೊರಬಂದಿದೆ.
ಪ್ರವಾಸದಿಂದ ಮರಳಿದ ನಂತರ ಕಳ್ಳತನ ಗೊತ್ತಾಗುತ್ತಿದ್ದಂತೆ ಉದ್ಯಮಿ ದೂರು ದಾಖಲಿಸಿದ್ದರು. ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆಯಿಂದಲೇ ಮನೆ ಕೆಲಸದವರ ಕಳ್ಳಾಟ ಬಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

