ಪ್ರತಿ ವರ್ಷ ಸೆಪ್ಟೆಂಬರ್ 18ರಂದು ವಿಶ್ವ ಬಿದಿರು ದಿನವನ್ನು ಆಚರಿಸಲಾಗುತ್ತದೆ. ಈ ದಿನವು ಬಿದಿರಿನ ಪರಿಸರ ಸ್ನೇಹಿ ಗುಣಗಳನ್ನು ಪ್ರಚಾರ ಮಾಡುವುದರೊಂದಿಗೆ, ಅದರ ಆರ್ಥಿಕ ಮತ್ತು ಸಾಮಾಜಿಕ ಮಹತ್ವವನ್ನು ನೆನಪಿಸುತ್ತದೆ. ಬಿದಿರು ಕೇವಲ ಸಸ್ಯವಲ್ಲ, ಪರಿಸರ ಸಮತೋಲನ, ಹಸಿರು ಆರ್ಥಿಕತೆ ಮತ್ತು ಗ್ರಾಮೀಣ ಅಭಿವೃದ್ಧಿಗೆ ದಾರಿ ತೋರಿಸುವ ಪ್ರಮುಖ ಸಂಪತ್ತು.

‘ವಿಶ್ವ ಬಿದಿರು ದಿನ’ ಆಚರಣೆಯನ್ನು 2009 ರಲ್ಲಿ ವಿಶ್ವ ಬಿದಿರು ಸಂಸ್ಥೆ ಪ್ರಾರಂಭಿಸಿತು. ಸೆಪ್ಟೆಂಬರ್ 18, 2009 ರಲ್ಲಿ ಬ್ಯಾಂಕಾಕ್‌ನ ಥೈಲ್ಯಾಂಡ್‌ನಲ್ಲಿ ನಡೆದ 8 ನೇ ವಿಶ್ವ ಕಾಂಗ್ರೆಸ್ ಸಮ್ಮೇಳನದಲ್ಲಿ ವಿಶ್ವ ಬಿದಿರು ಸಂಸ್ಥೆಯು ಈ ದಿನವನ್ನು ಆಚರಿಸುವುದಾಗಿ ಘೋಷಿಸಿತು. ಅಂದಿನಿಂದ ಪ್ರತಿವರ್ಷ ಬಿದಿರು ಕೃಷಿ ಮತ್ತು ಅದರ ಉಪಯೋಗಗಳ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.
ಬಿದಿರು ಕಾರ್ಬನ್ ಡೈಆಕ್ಸೈಡ್‌ನ್ನು ಹೆಚ್ಚು ಹೀರಿಕೊಂಡು ಆಮ್ಲಜನಕವನ್ನು ಬಿಡುಗಡೆ ಮಾಡುವ ಸಾಮರ್ಥ್ಯ ಹೊಂದಿದೆ. ಹವಾಮಾನ ಬದಲಾವಣೆಗೆ ವಿರುದ್ಧ ಹೋರಾಡಲು ಇದು ಪ್ರಮುಖ ಆಯುಧ.

ಆರ್ಥಿಕ ಮಹತ್ವ
ಗ್ರಾಮೀಣ ಉದ್ಯೋಗ ಸೃಷ್ಟಿಯಲ್ಲಿ ಬಿದಿರು ಮಹತ್ತರ ಪಾತ್ರ ವಹಿಸುತ್ತಿದೆ. ಕಾಗದ, ಅಡುಗೆ ಸಾಮಾನುಗಳಿಂದ ಹಿಡಿದು ಹಸ್ತಕಲಾವಸ್ತುಗಳವರೆಗೂ ಹಲವು ಕ್ಷೇತ್ರಗಳಲ್ಲಿ ಇದರ ಬಳಕೆ ಇದೆ. ಕೆಲವೇ ತಿಂಗಳಲ್ಲಿ ಬೆಳೆಯುವ ಬಿದಿರು, “ಹಸಿರು ಉಕ್ಕು” ಎಂದು ಕರೆಯಲ್ಪಡುತ್ತದೆ. ಕಟ್ಟಡ ನಿರ್ಮಾಣದಲ್ಲಿ ಇದನ್ನು ಪರಿಸರ ಸ್ನೇಹಿ ಪರ್ಯಾಯವಾಗಿ ಬಳಸಲಾಗುತ್ತಿದೆ.
ವಿಶ್ವ ಬಿದಿರು ದಿನವು ಕೇವಲ ಆಚರಣೆ ಮಾತ್ರವಲ್ಲ, ಬಿದಿರಿನ ಮಹತ್ವವನ್ನು ಅರಿತು ಅದರ ಸಂರಕ್ಷಣೆ ಮತ್ತು ಸದ್ಬಳಕೆಗೆ ಕರೆ ನೀಡುವ ಸಂದರ್ಭ. ಹಸಿರು ಭೂಮಿಯ ಕನಸನ್ನು ನನಸು ಮಾಡಲು ಬಿದಿರು ಮಹತ್ವದ ಪಾತ್ರ ವಹಿಸುತ್ತದೆ.
