ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಕ್ರಿಕೆಟ್‌ನ ದಿಗ್ಗಜ ಯುವರಾಜ್ ಸಿಂಗ್ ಮತ್ತೊಮ್ಮೆ ಕ್ರಿಕೆಟ್ ಮೈದಾನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್‌ನ (WCL 2025) ಎರಡನೇ ಆವೃತ್ತಿ ಇನ್ನು ಕೆಲವೇ ದಿನಗಳಲ್ಲಿ ಆರಂಭವಾಗಲಿದ್ದು, ಇಂಡಿಯಾ ಚಾಂಪಿಯನ್ಸ್ ಈ ಟೂರ್ನಮೆಂಟ್‌ನ ಮೊದಲ ಸೀಸನ್‌ನ ಟ್ರೋಫಿಯನ್ನು ಗೆದ್ದಿತ್ತು. ಯುವರಾಜ್ ಸಿಂಗ್ ನೇತೃತ್ವದ ಇಂಡಿಯಾ ಚಾಂಪಿಯನ್ಸ್ ತಂಡ ಮತ್ತೊಮ್ಮೆ ಚಾಂಪಿಯನ್ ಪಟ್ಟವ ಗೆಲ್ಲುವ ಗುರಿಯೊಂದಿಗೆ ಟೂರ್ನಿಗೆ ಪ್ರವೇಶಿಸಲಿದೆ.
ಈ ವರ್ಷದ ಜುಲೈ 18 ರಿಂದ ಆರಂಭವಾಗಲಿರುವ ಟೂರ್ನಿಯ ಫೈನಲ್ ಆಗಸ್ಟ್ 2 ರಂದು ನಡೆಯಲಿದೆ. ಈ ಲೀಗ್ನಲ್ಲಿ ಒಟ್ಟು 6 ತಂಡಗಳು ಭಾಗವಹಿಸಲಿದ್ದು, ಇದರಲ್ಲಿ ಇಂಡಿಯಾ ಚಾಂಪಿಯನ್ಸ್ ಜೊತೆಗೆ, ಪಾಕಿಸ್ತಾನ ಚಾಂಪಿಯನ್ಸ್, ಆಸ್ಟ್ರೇಲಿಯಾ ಚಾಂಪಿಯನ್ಸ್, ದಕ್ಷಿಣ ಆಫ್ರಿಕಾ ಚಾಂಪಿಯನ್ಸ್, ಇಂಗ್ಲೆಂಡ್ ಚಾಂಪಿಯನ್ಸ್ ಮತ್ತು ವೆಸ್ಟ್ ಇಂಡೀಸ್ ಚಾಂಪಿಯನ್ಸ್ ತಂಡಗಳು ಸೇರಿವೆ.
ಪಾಕ್ ವಿರುದ್ಧ ಮೊದಲ ಪಂದ್ಯ
ಜುಲೈ 20 ರಂದು ಪಾಕಿಸ್ತಾನ ಚಾಂಪಿಯನ್ಸ್ ವಿರುದ್ಧ ಭಾರತ ತನ್ನ ಮೊದಲ ಲೀಗ್ ಪಂದ್ಯವನ್ನು ಆಡಲಿದೆ. ಇದಾದ ನಂತರದ ಪಂದ್ಯಗಳಲ್ಲಿ ಟೀಂ ಇಂಡಿಯಾ ಕ್ರಮವಾಗಿ ದಕ್ಷಿಣ ಆಫ್ರಿಕಾ (ಜು.22), ಆಸ್ಟ್ರೇಲಿಯಾ (ಜು.26), ಇಂಗ್ಲೆಂಡ್ (ಜು.27) ಮತ್ತು ವೆಸ್ಟ್ ಇಂಡೀಸ್ (ಜು.29) ತಂಡಗಳನ್ನು ಎದುರಿಸಲಿದೆ. ಲೀಗ್ ಪಂದ್ಯಗಳ ಬಳಿಕ ಜುಲೈ 31ರಂದು ಎರಡೂ ಸೆಮಿಫೈನಲ್‌ಗಳು ನಡೆಯಲಿದ್ದು, ಚಾಂಪಿಯನ್‌ಷಿಪ್ ಪಂದ್ಯ ಆಗಸ್ಟ್ 2ರಂದು ನಡೆಯಲಿದೆ.
ಹಿಂದಿನ ಸಾಧನೆ
2024ರ WCL ಟೂರ್ನಿಯಲ್ಲಿ ಇಂಡಿಯಾ ಚಾಂಪಿಯನ್ಸ್ ತಂಡವು ಯುವರಾಜ್ ನೇತೃತ್ವದಲ್ಲಿ ಐದು ಲೀಗ್ ಪಂದ್ಯಗಳಲ್ಲಿ ಎರಡು ಗೆಲುವು ಗಳಿಸಿತು. ಲೀಗ್ ಹಂತದಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡು ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಭಾರತ, ಆಸ್ಟ್ರೇಲಿಯಾ ವಿರುದ್ಧ 86 ರನ್‌ಗಳ ಭರ್ಜರಿ ಜಯ ಸಾಧಿಸಿತು. ಫೈನಲ್‌ನಲ್ಲಿ ಪಾಕಿಸ್ತಾನವನ್ನು ಐದು ವಿಕೆಟ್‌ಗಳಿಂದ ಮಣಿಸಿ ಚಾಂಪಿಯನ್ ಪಟ್ಟ ಗೆದ್ದಿತ್ತು.
ಭಾರತ ತಂಡ
ಯುವರಾಜ್ ಸಿಂಗ್ (ನಾಯಕ), ಶಿಖರ್ ಧವನ್, ರಾಬಿನ್ ಉತ್ತಪ್ಪ, ಅಂಬಟಿ ರಾಯುಡು, ಸುರೇಶ್ ರೈನಾ, ಇರ್ಫಾನ್ ಪಠಾಣ್, ಯೂಸುಫ್ ಪಠಾಣ್, ಹರ್ಭಜನ್ ಸಿಂಗ್, ಪಿಯೂಷ್ ಚಾವ್ಲಾ, ಸ್ಟುವರ್ಟ್ ಬಿನ್ನಿ, ಗುರುಕೀರತ್ ಸಿಂಗ್ ಮಾನ್, ವಿನಯ್ ಕುಮಾರ್, ಸಿದ್ಧಾರ್ಥ್ ಕೌಲ್, ಅಭಿಮನ್ಯು ಮಿಥುನ್, ವರುಣ್ ಆರೋನ್ ಮತ್ತು ಪವನ್ ನೇಗಿ.