ಹೊಸದಿಗಂತ ಡಿಜಿಟಲ್ ಡೆಸ್ಕ್:
ಏಷ್ಯಾಕಪ್(Asia Cup 2023 ಟೂರ್ನಿ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯದೇ ಇದ್ದರೆ ನಾವು ಭಾರತದಲ್ಲಿ ನಡೆಯುವ 2023ರ ಐಸಿಸಿ ಏಕ ದಿನ ವಿಶ್ವ ಕಪ್ ಟೂರ್ನಿಯನ್ನು ಬಹಿಷ್ಕರಿಸುತ್ತೇವೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಎಚ್ಚರಿಕೆ ನೀಡಿದೆ.
ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಸಭೆಯಲ್ಲಿ ಏಷ್ಯಾಕಪ್ ಪಂದ್ಯಾವಳಿಯ ಕುರಿತ ಸಭೆಯಲ್ಲಿ ಎಸಿಸಿ ಮುಖ್ಯಸ್ಥ ಜಯ್ ಶಾ, ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮುಖ್ಯಸ್ಥ ನಜಮ್ ಸೇಥಿ ಮತ್ತು ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಈ ಸಭೆಯಲ್ಲಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಈ ಹಿಂದೆ ಹೇಳಿದಂತೆ ಭಾರತ ತಂಡ ಏಷ್ಯಾಕಪ್ ಆಡಲು ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ ಎನ್ನುವ ಮಾತನ್ನು ಮತ್ತೊಮ್ಮೆ ಹೇಳಿದ್ದಾರೆ.
ಇದೇ ವಿಚಾರವಾಗಿ ಪಾಕ್ ಕ್ರಿಕೆಟ್ ಮಂಡಳಿ ಅಧ್ಯಕ್ಷ ನಜಮ್ ಸೇಥಿ ಅವರು ಭಾರತದಲ್ಲಿ ನಡೆಯುವ ಏಕದಿನ ವಿಶ್ವ ಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಆಡುವುದಿಲ್ಲ ಎಂದು ಹೇಳಿರುವುದಾಗಿ ವರದಿಯಾಗಿದೆ.
ಈ ಹಿಂದೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಿದ್ದ ರಮೀಜ್ ರಾಜಾ ಕೂಡ ತಮ್ಮ ಅಧಿಕಾರವಧಿಯಲ್ಲಿ ಬಿಸಿಸಿಐ ನಿಲುವನ್ನು ಟೀಕಿಸಿ ಭಾರತದಲ್ಲಿ ನಡೆಯುವ ಏಕ ದಿನ ವಿಶ್ವ ಕಪ್ ಟೂರ್ನಿಯನ್ನು ಬಹಿಷ್ಕರಿಸುವುದಾಗಿ ಎಚ್ಚರಿಸಿದ್ದರು. ಇದೀಗ ನೂತನ ಅಧ್ಯಕ್ಷ ನಜಮ್ ಸೇಥಿ ಕೂಡ ಇದೇ ನಿಲುವನ್ನು ಮುಂದುವರಿಸಿದ್ದಾರೆ.