ವಿಶ್ವದ ಇಂಧನ ದೃಷ್ಟಿಕೋನ ಮತ್ತು ಜಿ -20 ಸಭೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಶ್ರೀ ಆರ್.ಕೆ.ಸಿಂಗ್
ಕೇಂದ್ರ ವಿದ್ಯುತ್, ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರು

ಸೆಪ್ಟೆಂಬರ್ 9 ಮತ್ತು 10ರಂದು ನಡೆಯಲಿರುವ ಜಿ-20 ರಾಷ್ಟ್ರಗಳ ನಾಯಕರ ಶೃಂಗಸಭೆಯಲ್ಲಿ ಹವಾಮಾನ ಬದಲಾವಣೆಯನ್ನು ಎದುರಿಸಲು ಇಂಧನ ಪರಿವರ್ತನೆಯನ್ನು ವೇಗಗೊಳಿಸುವುದು ನಮ್ಮ ಪ್ರಾಥಮಿಕ ಕಾಳಜಿಯಾಗಲಿದೆ. ಹವಾಮಾನ ಬದಲಾವಣೆಯಿಂದ ಉಂಟಾಗುವ ತಕ್ಷಣದ ಅಪಾಯದ ಬಗ್ಗೆ ಜಾಗತಿಕ ಸಮುದಾಯದಲ್ಲಿ ಸರ್ವಾನುಮತದ ಅನುಮೋದನೆಯಿದೆ. ಜೊತೆಗೆ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯನ್ನು ನಿಗ್ರಹಿಸಲು ಮತ್ತು ಜಾಗತಿಕ ತಾಪಮಾನ ಹೆಚ್ಚಳವನ್ನು ಕೈಗಾರಿಕಾ ಪೂರ್ವ ಮಟ್ಟದಿಂದ 1.5 ಡಿಗ್ರಿಗಳಿಗೆ ಸೀಮಿತಗೊಳಿಸುವ ಪ್ರಯತ್ನದ ಭಾಗವಾಗಿ ತ್ವರಿತ ವೇಗದಲ್ಲಿ ಪಳೆಯುಳಿಕೆ ಇಂಧನಗಳಿಂದ ಪಳೆಯುಳಿಕೆಯೇತರ ಇಂಧನಗಳತ್ತ ಪರಿವರ್ತನೆಗೊಳ್ಳುವ ತುರ್ತು ಅವಶ್ಯಕತೆಯ ಬಗ್ಗೆಯೂ ಎಲ್ಲರೂ ಸಹಮತಿಸಿದ್ದಾರೆ.

ಭಾರತವು ವಿಶ್ವದಲ್ಲೇ ಅತ್ಯಂತ ಕಡಿಮೆ ತಲಾ ಹೊರಸೂಸುವಿಕೆಯನ್ನು ಹೊಂದಿರುವ ದೇಶಗಳಲ್ಲಿ ಒಂದೆನಿಸಿದೆ. ನಮ್ಮ ತಲಾ ಹೊರಸೂಸುವಿಕೆ 2.40 tCO2e (ಟನ್ ಇಂಗಾಲದ ಡೈಆಕ್ಸೈಡ್‌ಗೆ ಸಮನಾಗಿದೆ), ಆದರೆ ಜಾಗತಿಕ ಸರಾಸರಿ 6.3 tCO2e ಆಗಿದೆ. ಭಾರತವು ವಿಶ್ವದ ಜನಸಂಖ್ಯೆಯ 17 ಪ್ರತಿಶತದಷ್ಟು ಜನಸಂಖ್ಯೆಯನ್ನು ಹೊಂದಿದ್ದರೂ, ಜಾಗತಿಕ ಕಾರ್ಬನ್ ಡೈಆಕ್ಸೈಡ್ ಹೊರೆಗೆ ನಮ್ಮ ಕೊಡುಗೆ ಕೇವಲ 4% ಮಾತ್ರ. ಆದರೆ ತಾಪಮಾನದಲ್ಲಿ 2-ಡಿಗ್ರಿಗಿಂತಲೂ ಕಡಿಮೆ ಏರಿಕೆಗೆ ಅನುಗುಣವಾಗಿ ಇಂಧನ ಪರಿವರ್ತನೆ ಕ್ರಿಯೆಗಳನ್ನು ಹೊಂದಿರುವ ಏಕೈಕ ಪ್ರಧಾನ ಆರ್ಥಿಕತೆ ನಮ್ಮದಾಗಿದೆ.

ಪಳೆಯುಳಿಕೆಯೇತರ ವಿದ್ಯುತ್ ಉತ್ಪಾದನೆ:

ಪ್ಯಾರಿಸ್ ಹವಾಮಾನ ಶೃಂಗಸಭೆಯಲ್ಲಿ(ʻಸಿಒಪಿ 21), ನಾವು 2030ರ ವೇಳೆಗೆ 40% ಪಳೆಯುಳಿಕೆಯೇತರ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಸಾಧಿಸಲು ಪ್ರತಿಜ್ಞೆ ಮಾಡಿದ್ದೇವೆ, ಈ ಗುರಿಯನ್ನು ನಾವು 2021ರಲ್ಲೇ ಸಾಧಿಸಿದ್ದೇವೆ. ನಮ್ಮ ಪಳೆಯುಳಿಕೆಯೇತರ ಉತ್ಪಾದನಾ ಸಾಮರ್ಥ್ಯವು 187 ಗಿಗಾವ್ಯಾಟ್ ಆಗಿದ್ದು, ಇನ್ನೂ 103 ಗಿಗಾವ್ಯಾಟ್ ನಿರ್ಮಾಣ ಹಂತದಲ್ಲಿದೆ. ಗ್ಲ್ಯಾಸ್ಗೋದಲ್ಲಿ ನಡೆದ ಹವಾಮಾನ ಶೃಂಸಭೆಯಲ್ಲಿ (ಸಿಒಪಿ 26) ನಾವು 2030ರ ವೇಳೆಗೆ 50% ಪಳೆಯುಳಿಕೆಯೇತರ ವಿದ್ಯುತ್ ಉತ್ಪಾದನೆಯನ್ನು ತಲುಪಲು ಬದ್ಧತೆ ವ್ಯಕ್ತಪಡಿಸಿದ್ದೇವೆ.

ಪ್ಯಾರಿಸ್ ಹವಾಮಾನ ಶೃಂಗದಲ್ಲಿ (ʻಸಿಒಪಿ 21ʼ) 2030ರ ವೇಳೆಗೆ ಹೊರಸೂಸುವಿಕೆಯ ತೀವ್ರತೆಯನ್ನು 33% ರಷ್ಟು ಕಡಿಮೆ ಮಾಡುವುದಾಗಿ ನಾವು ಪ್ರತಿಜ್ಞೆ ಮಾಡಿದ್ದೇವೆ ಮತ್ತು ಅದನ್ನು 2019ರಲ್ಲೇ ಸಾಧಿಸಿದ್ದೇವೆ. 2030ರ ವೇಳೆಗೆ 45% ಹೊರಸೂಸುವಿಕೆಯ ತೀವ್ರತೆಯನ್ನು ಕಡಿಮೆ ಮಾಡುವುದು ಗ್ಲ್ಯಾಸ್ಗೋ ಹವಾಮಾನ ಶೃಂಗದಲ್ಲಿ (ಸಿಒಪಿ 26) ನಮ್ಮ ಹೊಸ ವಾಗ್ದಾನವಾಗಿದೆ.

ಇಂಧನ ದಕ್ಷತೆಯ ಉಪಕ್ರಮಗಳಲ್ಲಿ ನಾವೇ ಮುಂದು

ಇಂಧನ ದಕ್ಷತೆಯ ಉಪಕ್ರಮಗಳಲ್ಲಿ ನಾವು ಮುಂಚೂಣಿಯಲ್ಲಿದ್ದೇವೆ. ನಮ್ಮ ಉದ್ಯಮ ಕೇಂದ್ರಿತ ಕಾರ್ಯನಿರ್ವಹಣೆ, ಸಾಧನೆ ಮತ್ತು ವ್ಯಾಪಾರ ಕಾರ್ಯಕ್ರಮ (ಪಿಎಟಿ) ಮೂಲಕ ನಾವು ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯನ್ನು ವಾರ್ಷಿಕವಾಗಿ 106 ದಶಲಕ್ಷ ಟನ್ ಕಡಿಮೆ ಮಾಡಿದ್ದೇವೆ. ನಮ್ಮ ʻಉಪಕರಣ ಸ್ಟಾರ್ ಲೇಬಲಿಂಗ್ʼ ಕಾರ್ಯಕ್ರಮವು 57 ದಶಲಕ್ಷ ಟನ್ ವಾರ್ಷಿಕ ಇಂಗಾಲದ ಹೊರಸೂಸುವಿಕೆ ಕಡಿತಕ್ಕೆ ಕಾರಣವಾಗಿದೆ. ಇದೇ ವೇಳೆ ನಮ್ಮ ʻಎಲ್ಇಡಿʼ ಕಾರ್ಯಕ್ರಮದಿಂದ ಪ್ರತಿವರ್ಷ 106 ದಶಲಕ್ಷ ಟನ್ ಕಡಿತ ಸಾಧ್ಯವಾಗಿದೆ.

ಇಂಧನ ಲಭ್ಯತೆಯು ವಿಶ್ವಸಂಸ್ಥೆಯ ʻಸುಸ್ಥಿರ ಅಭಿವೃದ್ಧಿ ಗುರಿ 7ʼರ(ಎಸ್ಡಿಜಿ7) ಪ್ರಧಾನ ಅಂಶವಾಗಿದೆ. ನಮ್ಮ ಅಭೂತಪೂರ್ವ ವಿಸ್ತರಣಾ ಪ್ರಯತ್ನಗಳಿಂದಾಗಿ 18 ತಿಂಗಳಲ್ಲಿ ಸಾವಿರಾರು ಗ್ರಾಮಗಳು ಮತ್ತು 26 ದಶಲಕ್ಷ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಸಾಧ್ಯವಾಗಿದೆ. ಕಳೆದ ಒಂಬತ್ತು ವರ್ಷಗಳಲ್ಲಿ, ನಾವು ನಮ್ಮ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು 190 ಗಿಗಾವ್ಯಾಟ್ ಹೆಚ್ಚಿಸಿದ್ದೇವೆ ಮತ್ತು 1,97,000 ಸರ್ಕ್ಯೂಟ್ ಕಿಲೋಮೀಟರ್ ಪ್ರಸರಣ ಮಾರ್ಗಗಳನ್ನು ಸ್ಥಾಪಿಸಿದ್ದೇವೆ. ವಿಶ್ವದ ಅತಿದೊಡ್ಡ ಸಮಗ್ರ ಗ್ರಿಡ್ ಅನ್ನು ರಚಿಸಿದ್ದೇವೆ. ನಾವು ಸಾಧಕರಾಗಿ ಹೊರಹೊಮ್ಮಿದ್ದೇವೆ.

ಇಂಧನ ಪರಿವರ್ತನೆಯಲ್ಲಿ ವಿಶ್ವದ ಮುಂದೆ ಹಲವಾರು ಸವಾಲುಗಳಿವೆ. ದಿನದ 24 ಗಂಟೆಯೂ ನವೀಕರಿಸಬಹುದಾದ ಇಂಧನವನ್ನು ಹೊಂದಲು ಸಂಗ್ರಹಣೆ ಅತ್ಯಗತ್ಯ. ಇಂದು ಜಗತ್ತಿನಲ್ಲಿ ಬ್ಯಾಟರಿ ಶೇಖರಣಾ ಉತ್ಪಾದನಾ ಸಾಮರ್ಥ್ಯವು ಕೇವಲ 1163 ಗಿಗಾವ್ಯಾಟ್ ಆಗಿದೆ. ಪ್ರಸ್ತುತ ಶೇಖರಣಾ ವೆಚ್ಚವು ತುಂಬಾ ಹೆಚ್ಚಾಗಿದೆ. ನಾವು 1000 ಮೆಗಾವ್ಯಾಟ್ ಸಂಗ್ರಹಣೆಗಾಗಿ ಬಿಡ್ ಕರೆದಿದ್ದೇವೆ. ಇದು ವಿಶ್ವದ ಅತಿದೊಡ್ಡ ಬಿಡ್‌ಗಳಲ್ಲಿ ಒಂದಾಗಿದೆ. ಬ್ಯಾಟರಿ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವ ಕ್ರಮಗಳನ್ನೂ ನಾವು ಕೈಗೊಂಡಿದ್ದೇವೆ.

ಪರಮಾಣು ಶಕ್ತಿಯು ನಿರಂತರ ಹಾಗೂ ಶುದ್ಧ ವಿದ್ಯುತ್ ಉತ್ಪಾದನೆಗೆ ಅವಕಾಶ ನೀಡುತ್ತದೆ. ಆದಾಗ್ಯೂ, ನಮ್ಮನ್ನು ಹೊರತುಪಡಿಸಿ ಹೆಚ್ಚಿನ ಅಭಿವೃದ್ಧಿಶೀಲ ದೇಶಗಳು ಗಮನಾರ್ಹ ಮಟ್ಟದಲ್ಲಿ ಪರಮಾಣು ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿಲ್ಲ. ಸಣ್ಣ ಮಾಡ್ಯುಲರ್ ರಿಯಾರ್‌ಗಳು ಇದಕ್ಕೆ ಪರಿಹಾರವಾಗಬಲ್ಲವು. ಆದರೆ ಅದು ಇನ್ನೂ ಅಭಿವೃದ್ಧಿಯ ಹಂತದಲ್ಲಿದೆ.

ಈ ನಿಟ್ಟಿನಲ್ಲಿ ಮತ್ತೊಂದು ಪರಿಹಾರವೆಂದರೆ ʻಇಂಗಾಲದ ಸೆರೆ, ಬಳಕೆ ಮತ್ತು ಸಂಗ್ರಹಣೆʼ(ಸಿಸಿಯುಎಸ್). ಆದರೆ ಇದು ಸಹ ಆರಂಭಿಕ ಹಂತದಲ್ಲಿದೆ. ಈ ವಿಚಾರದಲ್ಲಿ ವೆಚ್ಚದ ಪ್ರಶ್ನೆಯ ಜೊತೆಗೆ ಸ್ವಾಧೀನದ ಪ್ರಶ್ನೆಯೂ ಕಾಡುತ್ತಿದೆ.

ಉತ್ಪಾದನೆ ಆಧರಿತ ಸಹಾಯಧನ ಯೋಜನೆ ಜಾರಿ

ಪೂರೈಕೆ ಸರಪಳಿಗಳನ್ನು ವೈವಿಧ್ಯಗೊಳಿಸುವುದು ಈ ನಿಟ್ಟಿನಲ್ಲಿ ಮತ್ತೊಂದು ಸವಾಲಾಗಿದೆ. ಪ್ರಸ್ತುತ, ಸೌರ ಕೋಶ ಮತ್ತು ಮಾಡ್ಯೂಲ್ ಉತ್ಪಾದನಾ ಸಾಮರ್ಥ್ಯವು ಬಹುತೇಕ ಒಂದೇ ದೇಶದಲ್ಲಿ ಕೇಂದ್ರೀಕೃತವಾಗಿದೆ. ದೊಡ್ಡ ಪ್ರಮಾಣದ ಉತ್ಪಾದನೆಯನ್ನು ಉತ್ತೇಜಿಸಲು ನಾವು ʻಉತ್ಪಾದನೆ ಆಧರಿತ ಸಹಾಯಧನʼ(ಪಿಎಲ್ಐ) ಯೋಜನೆಯನ್ನು ಜಾರಿಗೊಳಿಸಿದ್ದೇವೆ. 2026ರ ವೇಳೆಗೆ 100 ಗಿಗಾವ್ಯಾಟ್ ಉತ್ಪಾದನಾ ಸಾಮರ್ಥ್ಯವನ್ನು ಸಾಧಿಸುವ ಹಾದಿಯಲ್ಲಿದ್ದೇವೆ. ಅಂತೆಯೇ, ಸಂಗ್ರಹಣೆ ವಿಚಾರಕ್ಕೆ ಬಂದರೂ ಲಿಥಿಯಂ-ಐಯಾನ್ ಬ್ಯಾಟರಿ ಉತ್ಪಾದನಾ ಸಾಮರ್ಥ್ಯದ ಬಹುಪಾಲು ಒಂದೇ ದೇಶದಲ್ಲಿ ಕೇಂದ್ರೀಕೃತವಾಗಿದೆ. ಅದೃಷ್ಟವಶಾತ್, ನಾವು ನಮ್ಮ ಗಡಿಯೊಳಗೆ ಲಿಥಿಯಂ ನಿಕ್ಷೇಪಗಳನ್ನು ಗುರುತಿಸಿದ್ದೇವೆ ಮತ್ತು ಲಿಥಿಯಂ ಬ್ಯಾಟರಿ ತಯಾರಿಕೆಗಾಗಿ ಒಂದು ಯಶಸ್ವಿ ʻಪಿಎಲ್ಐʼ ಬಿಡ್ ಅನ್ನು ಪಡೆದುಕೊಂಡಿದ್ದೇವೆ.

ಮೇಲೆ ತಿಳಿಸಿದ ಸಮಸ್ಯೆಗಳು ಇಂಧನ ಪರಿವರ್ತನೆಯಲ್ಲಿನ ಅಡೆತಡೆಗಳನ್ನು ಎತ್ತಿ ತೋರಿಸುತ್ತವೆ, ಅವುಗಳನ್ನು ನನ್ನ ಅಧ್ಯಕ್ಷತೆಯಲ್ಲಿ ಗೋವಾದಲ್ಲಿ ನಡೆದ ʻಜಿ-20 ಇಂಧನ ಸಚಿವರ ಸಭೆʼಯಲ್ಲಿ ಚರ್ಚಿಸಲಾಯಿತು. ಹಿಂದಿನ ಯಾವುದೇ ʻಜಿ -20ʼ ಸಭೆಗಿಂತ ಹೆಚ್ಚಿನ ವಿಷಯಗಳ ಬಗ್ಗೆ ಒಪ್ಪಂದಗಳನ್ನು ಈ ಸಭೆಯಲ್ಲಿ ಕೈಗೊಳ್ಳಲಾಗಿದ್ದು, ಇದೊಂದು ಮಹತ್ವದ ಸಾಧನೆಯಾಗಿದೆ. ಇಂಧನ ಪರಿವರ್ತನೆಯನ್ನು ಮುಂದುವರಿಸುವ ಜೊತೆ ಜೊತೆಗೇ ಇಂಧನ ಲಭ್ಯತೆಯ ಮಹತ್ವವನ್ನೂ ನಾವು ಒಪ್ಪಿಕೊಂಡಿದ್ದೇವೆ. ಜಾಗತಿಕವಾಗಿ 773 ದಶಲಕ್ಷ ಜನರಿಗೆ ಇನ್ನೂ ವಿದ್ಯುತ್ ಲಭ್ಯವಾಗಿಲ್ಲ, ಇಂತಹ ಪರಿಸ್ಥಿತಿಯಲ್ಲಿ ಇಂಧನ ಪರಿವರ್ತನೆಯನ್ನು ಪೂರ್ಣವೆಂದು ಪರಿಗಣಿಸಲಾಗದು ಎಂಬುದನ್ನು ನಾವು ಗುರುತಿಸಿದ್ದೇವೆ.

ಇಂಧನ ಪರಿವರ್ತನೆಯ ಪ್ರಯತ್ನಗಳ ಜೊತೆಗೆ ನಾವು ಒಟ್ಟಾರೆಯಾಗಿ ಇಂಧನ ಭದ್ರತೆ, ಲಭ್ಯತೆ ಮತ್ತು ಕೈಗೆಟುಕುವಿಕೆಯನ್ನು ಮುನ್ನಡೆಸುವ ಮಹತ್ವವನ್ನು ಗುರುತಿಸಿದ್ದೇವೆ. ಪ್ಯಾರಿಸ್ ಒಪ್ಪಂದ ಮತ್ತು ಅದರ ತಾಪಮಾನ ಗುರಿಯ ಸಂಪೂರ್ಣ ಅನುಷ್ಠಾನದ ಮೂಲಕ ಹವಾಮಾನ ಬದಲಾವಣೆಯನ್ನು ಪರಿಹರಿಸುವ ಅಗತ್ಯವನ್ನು ನಾವು ಒಪ್ಪಿಕೊಂಡಿದ್ದೇವೆ. ನೈಸರ್ಗಿಕ ಪರಿಸ್ಥಿತಿಗಳ ಆಧಾರದ ಮೇಲೆ ಸಮಾನತೆ ಮತ್ತು ವಿಭಿನ್ನ ಜವಾಬ್ದಾರಿಗಳಿಗೆ ಒತ್ತು ನೀಡಿದ್ದೇವೆ.

2030ರ ವೇಳೆಗೆ ಸ್ವಯಂಪ್ರೇರಿತ ಕ್ರಿಯಾ ಯೋಜನೆಗೆ ಅನುಮೋದನೆ

ಇಂಧನ ದಕ್ಷತೆಯ ಸುಧಾರಣೆಯ ವಿಚಾರದಲ್ಲಿ ಜಾಗತಿಕ ದರವನ್ನು ದ್ವಿಗುಣಗೊಳಿಸಲು ಮಾರ್ಗಸೂಚಿಯನ್ನು ರೂಪಿಸಲು ಎಲ್ಲಾ ಸಚಿವರು ಬದ್ಧರಾಗಿದ್ದಾರೆ ಮತ್ತು ಭಾರತದ ಅಧ್ಯಕ್ಷತೆಯಲ್ಲಿ ಸಿದ್ಧಪಡಿಸಿದ “2030ರ ವೇಳೆಗೆ ಜಾಗತಿಕ ಇಂಧನ ದಕ್ಷತೆಯ ಸುಧಾರಣೆಯ ದರವನ್ನು ದ್ವಿಗುಣಗೊಳಿಸುವ ಸ್ವಯಂಪ್ರೇರಿತ ಕ್ರಿಯಾ ಯೋಜನೆ”ಯನ್ನು ಅನುಮೋದಿಸಿದ್ದಾರೆ.

ಇದಲ್ಲದೆ, ನವೀಕರಿಸಬಹುದಾದ ಇಂಧನ ಉಪಕರಣಗಳು ಮತ್ತು ನಿರ್ಣಾಯಕ ಖನಿಜಗಳಿಗೆ ವಿಶ್ವಾಸಾರ್ಹ ಮತ್ತು ವೈವಿಧ್ಯಮಯ ಪೂರೈಕೆ ಸರಪಳಿಗಳ ಅಗತ್ಯವನ್ನು ನಾವು ಒತ್ತಿಹೇಳಿದ್ದೇವೆ. ಭವಿಷ್ಯದ ಇಂಧನವಾಗಿ ಶೂನ್ಯ ಮತ್ತು ಕನಿಷ್ಠ ಹೊರಸೂಸುವಿಕೆಯ ತಂತ್ರಜ್ಞಾನಗಳಿಂದ ಉತ್ಪತ್ತಿಯಾಗುವ ಜಲಜನಕದ ಪ್ರಾಮುಖ್ಯತೆಯನ್ನು ಗುರುತಿಸಲಾಗಿದೆ. ಶೂನ್ಯ ಮತ್ತು ಕಡಿಮೆ-ಹೊರಸೂಸುವಿಕೆಯ ತಂತ್ರಜ್ಞಾನಗಳಿಂದ ಉತ್ಪಾದಿಸಲಾದ ಹೈಡ್ರೋಜನ್ ಮತ್ತು ಅಮೋನಿಯಾದ ಮಾನದಂಡಗಳನ್ನು ಸಮನ್ವಯಗೊಳಿಸುವ ಅಗತ್ಯವನ್ನು ಎಲ್ಲಾ ಸಚಿವರು ಒಪ್ಪಿಕೊಂಡಿದ್ದು, ಇದರಲ್ಲಿ ನ್ಯಾಯಯುತ ಮತ್ತು ಮುಕ್ತ ವ್ಯಾಪಾರವನ್ನು ಪ್ರತಿಪಾದಿಸಿದ್ದಾರೆ. ಭಾರತೀಯ ಅಧ್ಯಕ್ಷತೆಯಲ್ಲಿ ಪರಿಚಯಿಸಲಾದ ʻಜಲಜನಕ ಕುರಿತ ಜಿ-20 ಉನ್ನತ ಮಟ್ಟದ ಸ್ವಯಂಪ್ರೇರಿತ ತತ್ವಗಳನ್ನು’ ಸಚಿವರು ಅಳವಡಿಸಿಕೊಂಡಿದ್ದಾರೆ.

ಅಭಿವೃದ್ಧಿಶೀಲ ಆರ್ಥಿಕತೆಗಳಿಗೆ, ಕೈಗೆಟುಕುವ ದರದ ಮತ್ತು ಉದಯೋನ್ಮುಖ ಇಂಧನ ಪರಿವರ್ತನೆ ತಂತ್ರಜ್ಞಾನಗಳ ಸಮಾನ ಲಭ್ಯತೆ ಅತ್ಯಗತ್ಯವೆಂದು ಗುರುತಿಸಲಾಗಿದೆ. ಆದ್ದರಿಂದ ತಂತ್ರಜ್ಞಾನ ಹಂಚಿಕೆಗಾಗಿ ಪ್ರಾದೇಶಿಕ ಬಹುಪಕ್ಷೀಯ ಮತ್ತು ಸಾರ್ವಜನಿಕ-ಖಾಸಗಿ ಜಾಲಗಳನ್ನು ರೂಪಿಸುವುದು ಅಗತ್ಯವಾಗಿದೆ.

ಇಂಧನ ಪರಿವರ್ತನೆಗೆ ಕಡಿಮೆ ಬಡ್ಡಿದರದಲ್ಲಿ ಹಣಕಾಸು ಲಭ್ಯತೆಯು ಅಭಿವೃದ್ಧಿಶೀಲ ಆರ್ಥಿಕತೆಗಳಿಗೆ ಅತ್ಯಗತ್ಯವೆಂದು ಅಂಗೀಕರಿಸಲಾಗಿದೆ. ಈ ನಿಟ್ಟಿನಲ್ಲಿ ಭಾರತದ ಅಧ್ಯಕ್ಷತೆಯಲ್ಲಿ ಸಿದ್ಧಪಡಿಸಿದ “ಇಂಧನ ಪರಿವರ್ತನೆಗೆ ಕಡಿಮೆ ವೆಚ್ಚದ ಹಣಕಾಸು” ಕುರಿತ ವರದಿಯತ್ತ ಸಚಿವರು ಗಮನಹರಿಸಿದ್ದಾರೆ.

ಈ ಇಂಧನ ಸಚಿವರ ಸಭೆ ಭಾರಿ ಯಶಸ್ವಿಯಾಗಿದ್ದು, ಭಾರತದ ಅತ್ಯುನ್ನತ ಸಭೆ ಸಂಘಟನೆ ಬಗ್ಗೆ ಸರ್ವಾನುಮತದ ಶ್ಲಾಘನೆ ವ್ಯಕ್ತವಾಗಿದೆ. ಇದರಲ್ಲಿ ನಾವು ಗಮನಿಸಬೇಕಾದ ಎರಡು ಪ್ರಮುಖ ಅಂಶಗಳು ಇವೆ – ಭಾರತವು ಇಂಧನ ಪರಿವರ್ತನೆಯಲ್ಲಿ ನಾಯಕನಾಗಿದೆ ಮತ್ತು ಜಾಗತಿಕ ದಕ್ಷಿಣದ ಧ್ವನಿಯಾಗಿ ಹೊರಹೊಮ್ಮಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!