ಹೊಸದಿಗಂತ ವರದಿ ಮಂಡ್ಯ :
ವಿಶ್ವವಿಖ್ಯಾತ ಕೆ.ಆರ್.ಎಸ್. ಬೃಂದಾವನ, ಗಿಡ-ಮರಗಳ ಸಸ್ಯಗಳ ರಮ್ಯ ತಾಣ, ಸುಂದರ ಪರಿಸರ, ಜುಳು ಜುಳು ಹರಿವ ಕಾರಂಜಿ, ಹಕ್ಕಿಗಳ ನೀನಾದದ ನಡುವೆ ಪ್ರಕೃತಿಯ ಮಡಿಲಲ್ಲಿ ಯೋಗಪಟುಗಳು ಧೀರ್ಘ ಉಸಿರಾಡುತ್ತಾ, ಅಷ್ಟೇ ನಿಧಾನವಾಗಿ ಜೀವವಾಯುವನ್ನು ಹೊರಹಾಕತ್ತಾ ಯೋಗಾಸನದಲ್ಲಿ ತೊಡಗಿದ್ದು ವಿಶೇಷವಾಗಿತ್ತು.
ಸಾಮಾನ್ಯವಾಗಿ ಯೋಗಾಭ್ಯಾಸ ಪ್ರಕೃತಿಯ ರಮ್ಯ ತಾಣಗಳ ನಡುವೆ ನಡೆದರೆ ಮತ್ತಷ್ಟು ಹುರುಪು ಬರುತ್ತದೆ. ಚುಮು ಚುಮು ಚಳಿಯ ನಡುವೆ ಜುಳು ಜುಳು ಹರಿವ ಕಾರಂಜಿಯ ನೀರಿ ಮಧ್ಯೆ ಕಿವಿಗೆ ಇಂಪಾದ ಹಕ್ಕಿ, ಪಕ್ಷಿಗಳ ಕರಲವವನ್ನು ಕೇಳಿಸಿಕೊಳ್ಳುತ್ತಲೇ ಯೋಗದಲ್ಲಿ ಮಗ್ನರಾಗುವುದೇ ನಿಜವಾದ ಯೋಗಾಭ್ಯಾಸ.
ತಣ್ಣನೆಯ ಗಾಳಿ, ಹಕ್ಕಿಗಳ ಚಿಪಿಲಿಪಿಗಳನ್ನು ಕೇಳಿಸಿಕೊಳ್ಳುತ್ತಲೇ, ಇದಾವುದಕ್ಕೂ ಹೆಚ್ಚಾಗಿ ಕಿವಿಗೊಡದೆ ಯೋಗಾಸನಕ್ಕೆ ಮನಸ್ಸನ್ನು ಮುದಗೊಳಿಸುವುದರೊಂದಿಗೆ ದೇಹವನ್ನೂ ಯೋಗಾಸನ ಪ್ರಕ್ರಿಯೆ ಒಗ್ಗಿಕೊಂಡು ಯೋಗ ಮಾಡುವುದನ್ನು ಸಾಮಾನ್ಯವಾಗಿ ಯೋಗ ಗುರುಗಳು ಪ್ರಾರಂಭದಲ್ಲೇ ನಮಸ್ಕಾರದ ಸಮಯದಲ್ಲೇ ಸಲಹೆ ನೀಡುತ್ತಾರೆ.
ಇಂತಹ ಪ್ರಕೃತಿದತ್ತವಾದ ಸಸ್ಯರಾಶಿ, ಹೂವು-ಗಿಡಗಳ ನಡುವೆ ಯೋಗಾಸನ ಮಾಡಿದ್ದು, ಖುಷಿ ತಂದಿದೆ. ಇದರಿಂದ ಮತ್ತಷ್ಟು ಯೋಗಾಸನಗಳನ್ನು ಮಾಡುವಷ್ಟರ ಮಟ್ಟಿಗೆ ಮನಸ್ಸು ಹಾತೊರೆದ್ದಂತೂ ಸತ್ಯ. ನಿತ್ಯ ಅಭ್ಯಾಸ ಮಾಡುವವರಿಗೆ ಇದೊಂದು ಹೊಸ ಅನುಭವವಾದರೆ, ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡವರಿಗೂ ಯೋಗಪಟುಗಳು ಮಾಡುತ್ತಿದ್ದರೆ, ನಾವೂ ಅವರಂತೆ ದೇಹವನ್ನು ಬಗ್ಗಿಸಬೇಕು ಎಂಬ ಪೈಪೋಟಿಯ ನಡುವೆ ಆಸನಗಳ ಪ್ರದರ್ಶನ ಮಾಡಿದ್ದು ಕಂಡುಬಂತು.
ಯೋಗಪಟುಗಳಿಗೆ ನಿತ್ಯ ಯೋಗ ಮಾಡದಿದ್ದರೆ ಏನೋ ಕಳೆದುಕೊಂಡ ಅನುಭವವಾದರೆ, ಹೊಸದಾಗಿ ಯೋಗ ಮಾಡಿದವರಿಗೆ ದೇಹ ಚೇತೋಹಾರಿಯಾಗಿ, ಅಲ್ಲಲ್ಲಿ ಒಂದಷ್ಟು ನೋವುಗಳಿದ್ದರೂ, ದೇಹಕ್ಕೆ ಹಿತ ನೀಡುವ ಅನುಭವ ನಿಜಕ್ಕೂ ಅವಿಸ್ಮರಣೀಯ ಎಂಬುದು ಅವರ ಅನುಭವದ ಮಾತು. ಏನೇ ಇರಲಿ, ಪ್ರಕೃತಿಯ ರಮ್ಯ ತಾಣದಲ್ಲಿ, ಕೆ.ಆರ್.ಎಸ್. ಬೃಂದಾವನದಲ್ಲಿ ಯೋಗಪಟುಗಳು ವಿವಿಧ ಯೋಗಾಸನಗಳನ್ನು ಮಾಡಿದ್ದು ಖುಷಿ ನೀಡಿದ್ದಂತೂ ಸತ್ಯ. ಕೆಲವರು ಜಿಲ್ಲಾಡಳಿತಕ್ಕೆ ಮನದೊಳಗೆ ಧನ್ಯವಾದಗಳನ್ನು ಅರ್ಪಿಸಿದ್ದರು.
ಚಂದ್ರವನ ಆಶ್ರಮದ ಶ್ರೀ ತ್ರಿನೇತ್ರಮಹಂತ ಶಿವಯೋಗಿ ಸ್ವಾಮೀಜಿ, ಶಾಸಕ ರಮೇಶ್ ಬಂಡಿಸಿದ್ದೇಗೌಡ, ಜಿಲ್ಲಾಧಿಕಾರಿ ಡಾ. ಕುಮಾರ್, ಜಿಪಂ ಸಿಇಓ ಶೇಖ್ ತನ್ವೀರ್ ಆಸೀಫ್, ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್. ಯತೀಶ್ ಇತರರು ಇದ್ದರು.