ಹೊಸದಿಗಂತ ಡಿಜಿಟಲ್ ಡೆಸ್ಕ್:
ನ್ಯೂಝಿಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೂರು ಪಂದ್ಯಗಳ ಟೆಸ್ಟ್ ಸರಣಿ ಅಂತ್ಯಗೊಂಡ ಬೆನ್ನಲ್ಲೇ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಅಂಕಪಟ್ಟಿಯಲ್ಲಿ ಮಹತ್ವದ ಬದಲಾವಣೆ ಕಂಡುಬಂದಿದೆ. ಸರಣಿಯನ್ನು 2-0 ಅಂತರದಿಂದ ಜಯಿಸಿದ ನ್ಯೂಝಿಲೆಂಡ್ ತಂಡ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದು, ಚಾಂಪಿಯನ್‌ಶಿಪ್ ಪೈಪೋಟಿಗೆ ಬಲವಾದ ಸಂದೇಶ ನೀಡಿದೆ.
ನವೀಕೃತ ಅಂಕಪಟ್ಟಿಯಲ್ಲಿ ಆಸ್ಟ್ರೇಲಿಯಾ ತಂಡ ತನ್ನ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ. ಇದುವರೆಗೆ ಆಡಿದ ಆರು ಪಂದ್ಯಗಳಲ್ಲೂ ಜಯ ಸಾಧಿಸಿರುವ ಆಸೀಸ್ ಪಡೆ ಶೇ.100 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ವೆಸ್ಟ್ ಇಂಡೀಸ್ ವಿರುದ್ಧದ ಸರಣಿ ಗೆಲುವಿನೊಂದಿಗೆ ನ್ಯೂಝಿಲೆಂಡ್ ತಂಡ ಶೇ.77.78 ಅಂಕಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದೆ.
ಟೀಮ್ ಇಂಡಿಯಾವನ್ನು 2-0 ಅಂತರದಿಂದ ಮಣಿಸಿರುವ ದಕ್ಷಿಣ ಆಫ್ರಿಕಾ ತಂಡ ಶೇ.75 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಶ್ರೀಲಂಕಾ ತಂಡ ಒಂದು ಜಯ ಮತ್ತು ಒಂದು ಡ್ರಾ ಮೂಲಕ ನಾಲ್ಕನೇ ಸ್ಥಾನದಲ್ಲಿ ಮುಂದುವರಿದಿದೆ. ಪಾಕಿಸ್ತಾನ್ ತಂಡ ಐದನೇ ಸ್ಥಾನ ಪಡೆದುಕೊಂಡಿದೆ.
ಒಂಬತ್ತು ಪಂದ್ಯಗಳಲ್ಲಿ ನಾಲ್ಕು ಗೆಲುವು, ಒಂದು ಡ್ರಾ ಮತ್ತು ನಾಲ್ಕು ಸೋಲುಗಳೊಂದಿಗೆ ಭಾರತ ತಂಡ ಶೇ.48.15 ಅಂಕ ಪಡೆದು ಆರನೇ ಸ್ಥಾನಕ್ಕೆ ಕುಸಿದಿದೆ. ಇಂಗ್ಲೆಂಡ್, ಬಾಂಗ್ಲಾದೇಶ್ ಮತ್ತು ವೆಸ್ಟ್ ಇಂಡೀಸ್ ತಂಡಗಳು ಅಂಕಪಟ್ಟಿಯ ಕೊನೆಯ ಸ್ಥಾನಗಳಲ್ಲಿ ಉಳಿದಿವೆ. ಮುಂದಿನ ಸರಣಿಗಳು WTC ಪೈಪೋಟಿಯನ್ನು ಇನ್ನಷ್ಟು ರೋಚಕವಾಗಿಸುವ ನಿರೀಕ್ಷೆ ಇದೆ.

