ಭೂಮಿಯ ಮೇಲಿನ ಪ್ರತಿಯೊಂದು ಜೀವಿಗೂ ಜೀವನಾಡಿ ಏನು ಎಂದರೆ ಅದು ನೀರು. ಆದರೆ ಇಂದು ಅದೇ ನೀರಿನ ಕೊರತೆ ಮಾನವಕುಲಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಪ್ರತಿದಿನ ನಾವು ಬಳಸುವ ಒಂದು ಹನಿ ನೀರಿಗೂ ಅರ್ಥವಿದೆ. ಅದನ್ನು ಉಳಿಸುವ ಜವಾಬ್ದಾರಿ ನಮ್ಮ ಪ್ರತಿಯೊಬ್ಬರದ್ದೂ ಆಗಿದೆ. ಈ ಅರಿವು ಮೂಡಿಸಲು ವಿಶ್ವದಾದ್ಯಂತ ಮಾರ್ಚ್ 22 ರಂದು “ವಿಶ್ವ ಜಲ ದಿನ”ವನ್ನು ಆಚರಿಸಲಾಗುತ್ತದೆ.
ವಿಶ್ವ ಜಲ ದಿನದ ಇತಿಹಾಸವೇನು?
ವಿಶ್ವ ಜಲ ದಿನವನ್ನು ಪ್ರತಿ ವರ್ಷ ಮಾರ್ಚ್ 22ರಂದು ಆಚರಿಸಲಾಗುತ್ತದೆ. 1992ರಲ್ಲಿ ಬ್ರೆಝಿಲ್ನ ರಿಯೋ ಡಿ ಜನೈರೋದಲ್ಲಿ ನಡೆದ “ಭೂಮಿ ಶೃಂಗಸಭೆ” (Earth Summit) ಸಂದರ್ಭದಲ್ಲಿ ನೀರಿನ ಮಹತ್ವವನ್ನು ಜಾಗತಿಕ ಮಟ್ಟದಲ್ಲಿ ಚರ್ಚಿಸಲಾಯಿತು. ಇದರ ಆಧಾರದ ಮೇಲೆ 1993ರಿಂದ ಅಧಿಕೃತವಾಗಿ ವಿಶ್ವ ಜಲ ದಿನವನ್ನು ಆಚರಿಸುವುದನ್ನು ಆರಂಭಿಸಲಾಯಿತು. ಈ ದಿನದ ಮೂಲಕ ಶುದ್ಧ ನೀರಿನ ಅಗತ್ಯತೆ ಮತ್ತು ಜಲ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವುದು ಮುಖ್ಯ ಉದ್ದೇಶ.
ಇದನ್ನೂ ಓದಿ:
ವಿಶ್ವ ಜಲ ದಿನದ ಮಹತ್ವವೇನು?
- ನೀರು ಎಷ್ಟು ಅಮೂಲ್ಯ ಎಂಬುದನ್ನು ಜನರಿಗೆ ತಿಳಿಸುವ ದಿನ ಇದು. ದಿನನಿತ್ಯ ನಾವು ವ್ಯರ್ಥ ಮಾಡುವ ನೀರಿನ ಮಹತ್ವವನ್ನು ಈ ದಿನ ನೆನಪಿಸುತ್ತದೆ.
- ಮಳೆನೀರು ಸಂಗ್ರಹಣೆ, ನೀರಿನ ಮರುಬಳಕೆ ಮುಂತಾದ ಉತ್ತಮ ಪದ್ಧತಿಗಳನ್ನು ಅನುಸರಿಸಲು ಈ ದಿನ ಪ್ರೇರಣೆ ನೀಡುತ್ತದೆ.
- ನೀರಿನ ಕೊರತೆ, ಹವಾಮಾನ ಬದಲಾವಣೆ, ಕುಡಿಯುವ ನೀರಿನ ಅಭಾವ ಇವುಗಳ ಬಗ್ಗೆ ವಿಶ್ವದ ಗಮನ ಸೆಳೆಯುತ್ತದೆ.
- ಪ್ರತಿ ವ್ಯಕ್ತಿಗೂ ಶುದ್ಧ ನೀರು ದೊರಕಬೇಕು ಎಂಬ ಸಂದೇಶವನ್ನು ಈ ದಿನ ಸಾರುತ್ತದೆ.
- ಇಂದು ನೀರನ್ನು ಉಳಿಸಿದರೆ ನಾಳೆ ನಮ್ಮ ಮಕ್ಕಳಿಗೆ ಬದುಕು ಸುಲಭವಾಗುತ್ತದೆ ಎಂಬ ಅರಿವು ಮೂಡಿಸುತ್ತದೆ.
ನೀರು ನಮ್ಮ ಜೀವನದ ಮೂಲ. ಅದು ಇಲ್ಲದಿದ್ದರೆ ಬದುಕೇ ಅಸಾಧ್ಯ. “ನೀರು ಉಳಿಸಿ – ಜೀವ ಉಳಿಸಿ” ಎಂಬ ಮಾತು ಕೇವಲ ಘೋಷಣೆ ಅಲ್ಲ, ಅದು ನಮ್ಮ ಬದುಕಿನ ಮಾರ್ಗವಾಗಬೇಕು. ಇಂದಿನಿಂದಲೇ ಪ್ರತಿಯೊಂದು ಹನಿಯನ್ನು ಉಳಿಸುವ ಸಂಕಲ್ಪ ಮಾಡೋಣ.



