ಹೊಸದಿಗಂತ ಡಿಜಿಟಲ್ ಡೆಸ್ಕ್:
ಛತ್ತೀಸ್‌ಗಢದ ರಾಯಗಢದಲ್ಲಿ ನಾಯಿ ಬೊಗಳಿದಕ್ಕೆ ಉಂಟಾದ ಜಗಳವು ಭೀಕರ ಕೊಲೆಯಲ್ಲಿ ಅಂತ್ಯವಾಗಿದೆ. ನಾಯಿ ಬೊಗಳಿದ ವಿಚಾರದಿಂದ ಆರಂಭವಾದ ವಾಗ್ವಾದವು ಕೊನೆಗೆ ಕೊಡಲಿ ದಾಳಿಗೆ ತಿರುಗಿ, 25 ವರ್ಷದ ಯುವಕ ಪ್ರಾಣ ಕಳೆದುಕೊಂಡಿದ್ದಾನೆ. ಈ ಘಟನೆಯಲ್ಲಿ ಮಧ್ಯಪ್ರವೇಶಿಸಿದ ಮೃತನ ಚಿಕ್ಕಪ್ಪ ಗಂಭೀರವಾಗಿ ಗಾಯಗೊಂಡಿದ್ದಾರೆ.
ರಾಯಗಢದ ಫಿಟ್ಟಿಂಗ್‌ಪರಾ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ. ಮೃತನನ್ನು ಸುಜಿತ್ ಖಾಲ್ಖೋ ಎಂದು ಗುರುತಿಸಲಾಗಿದ್ದು, ಅವರು ರಾತ್ರಿ ಊಟ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಮೂವರು ಆರೋಪಿಗಳು ಕೊಡಲಿಯಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಸುಜಿತ್‌ನ್ನು ಉಳಿಸಲು ಯತ್ನಿಸಿದ ಅವರ ಚಿಕ್ಕಪ್ಪ ಸುರೇಶ್ ಮಿಂಜ್ ಮೇಲೆಯೂ ದಾಳಿ ನಡೆದಿದ್ದು, ಅವರು ಗಂಭೀರ ಗಾಯಗೊಂಡಿದ್ದಾರೆ.
ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಸುಜಿತ್ ಸಾಕುತ್ತಿದ್ದ ನಾಯಿ ಆರೋಪಿಗಳನ್ನು ನೋಡಿ ಬೊಗಳಿದ ಪರಿಣಾಮ ವಾಗ್ವಾದ ಶುರುವಾಗಿ, ಹಳೆಯ ವೈಷಮ್ಯ ಕೂಡ ಸೇರಿ ದಾಳಿಗೆ ಕಾರಣವಾಗಿದೆ. ಆರೋಪಿಗಳು ನಿರಂತರವಾಗಿ ಹರಿತವಾದ ಕೊಡಲಿಯಿಂದ ಹೊಡೆದಿದ್ದಾರೆ. ಈ ಪರಿಣಾಮ ಸುಜಿತ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಘಟನೆಯ ಬಳಿಕ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಇಬ್ಬರು ಅಪ್ರಾಪ್ತರನ್ನು ಸೇರಿಸಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ರಾಯಗಢ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾಂಗ್ ಪಟೇಲ್ ಬಂಧನದ ವಿಷಯವನ್ನು ದೃಢಪಡಿಸಿದ್ದು, ನಾಯಿ ಬೊಗಳಿದ ವಿವಾದ ಮತ್ತು ಹಳೆಯ ವೈಷಮ್ಯ ಎರಡೂ ಕೊಲೆಗೆ ಕಾರಣ ಎಂದು ತನಿಖೆಯಿಂದ ತಿಳಿದುಬಂದಿದೆ.