ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೊಂಬಾಳೆ ಫಿಲ್ಮ್ಸ್ ಮತ್ತು ಕ್ಲೀಮ್ ಪ್ರೊಡಕ್ಷನ್ಸ್‌ನ ಪೌರಾಣಿಕ ಅನಿಮೇಟೆಡ್ ಚಿತ್ರ ಮಹಾವತಾರ ನರಸಿಂಹ ಇದೀಗ ಬುಕ್ ಮೈ ಶೋನಲ್ಲಿ 2 ಮಿಲಿಯನ್ ಟಿಕೆಟ್ ಮಾರಾಟ ಮಾಡಿದೆ. ಇದು ಕನ್ನಡ ಚಿತ್ರರಂಗಕ್ಕೆ ಹೊಸ ಮೈಲಿಗಲ್ಲಾಗಿದೆ. ಕೇವಲ ಐದು ದಿನಗಳಲ್ಲೇ 1 ಮಿಲಿಯನ್ ಟಿಕೆಟ್ ಮಾರಾಟ ದಾಖಲಿಸಿದ ಈ ಚಿತ್ರ, ಇದೀಗ 2 ಮಿಲಿಯನ್ ಸ್ಕೇಲ್ ದಾಟಿ ಎಲ್ಲರ ಗಮನ ಸೆಳೆದಿದೆ.
2023ರ ನಂತರ ಬುಕ್ ಮೈ ಶೋನಲ್ಲಿ ಈ ಮಟ್ಟದ ಟಿಕೆಟ್ ಮಾರಾಟ ಸಾಧಿಸಿರುವ ಪ್ರಥಮ ಕನ್ನಡ ಸಿನಿಮಾ ಎನ್ನುವುದು ಈ ಚಿತ್ರದ ಇನ್ನೊಂದು ಹೆಗ್ಗಳಿಕೆಯಾಗಿದ್ದು, ಈ ಹಿಂದೆ ಈ ಪಟ್ಟಿಯಲ್ಲಿ ‘ಕಾಟೇರಾ’ 970 ಸಾವಿರ ಟಿಕೆಟ್ ಮಾರಾಟದೊಂದಿಗೆ ಅಗ್ರ ಸ್ಥಾನದಲ್ಲಿತ್ತು. ಆದರೆ ‘ಮಹಾವತಾರ ನರಸಿಂಹ’ ಅದನ್ನು ಪುಡಿಗಟ್ಟಿದೆ.
ಚಿತ್ರ ಬಿಡುಗಡೆಗೊಂಡು ಒಂಬತ್ತು ದಿನಗಳಾದರೂ, ಪ್ರೇಕ್ಷಕರ ಸ್ಪಂದನೆ ಮಾತ್ರ ಕಡಿಮೆಯಾಗಿಲ್ಲ. ಬಿಡುಗಡೆಯ ಮೂರನೇ ದಿನದಿಂದಲೇ ಕುಟುಂಬ ಸಮೇತ ಜನ ಥಿಯೇಟರ್‌ಗಳತ್ತ ಬರುತಿದ್ದು, ವಿಶೇಷವಾಗಿ ಮಕ್ಕಳು, ಈ ಅನಿಮೇಟೆಡ್ ಚಿತ್ರವನ್ನು ಖುಷಿಯಿಂದ ನೋಡುತ್ತಿದ್ದಾರೆ. ಚಿತ್ರದ ಶೈಲಿ, ದೃಶ್ಯಾನುಭವ ಮತ್ತು ಪೌರಾಣಿಕತೆ ಮಕ್ಕಳಿಗೆ ಮನರಂಜನೆಯ ಜೊತೆಗೆ ಜ್ಞಾನವನ್ನೂ ನೀಡುತ್ತಿದೆ.
ಕೇವಲ 10 ದಿನಗಳಲ್ಲಿ ಈ ಚಿತ್ರ 91 ಕೋಟಿ ರೂ.ಗಳಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ವಿಶ್ವ ಬಾಕ್ಸ್ ಆಫೀಸ್‌ನಲ್ಲಿ 100 ಕೋಟಿ ರೂಪಾಯಿ ಗಡಿ ದಾಟಿದೆ. ಮಹಾವತಾರ್ ಸಿನಿಮಾ ಯೂನಿವರ್ಸ್ ಶೀರ್ಷಿಕೆಯಡಿ ನಿರ್ಮಿಸಲಾಗಿರುವ ಈ ಪ್ರಾಜೆಕ್ಟ್ ಮುಂದಿನ ದಿನಗಳಲ್ಲಿ ಇನ್ನಷ್ಟು ಚಿತ್ರಗಳನ್ನು ಒಳಗೊಂಡಿರಲಿದೆ.