ಲೋಕಕಲ್ಯಾಣಕ್ಕಾಗಿ ವಿಶೇಷ ಪೂಜೆ ಸಲ್ಲಿಸಿದ ಯದುವೀರ್

ದಿಗಂತ ವರದಿ ಸೋಮವಾರಪೇಟೆ:

ಆಲೂರುಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಪೋಕ್ಷೇತ್ರ ಮನೆಹಳ್ಳಿ ಮಠಕ್ಕೆ ಭೇಟಿ ನೀಡಿದ ಮೈಸೂರಿನ ರಾಜ ವಂಶಸ್ಥ ಹಾಗೂ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಲೋಕಕಲ್ಯಾಣಕ್ಕಾಗಿ ವಿಶೇಷ ಪೂಜೆ ಸಲ್ಲಿಸುವುದರೊಂದಿಗೆ ಸ್ವಾಮೀಜಿಗಳ ಆಶೀರ್ವಾದ ಪಡೆದರು.

ಕ್ಷೇತ್ರದ ಆರಾಧ್ಯ ದೈವ ವೀರಭದ್ರ ಸ್ವಾಮಿ, ಜೇನುಕಲ್ಲು ಸಿದ್ದೇಶ್ವರ ಸ್ವಾಮಿ ಸನ್ನಿಧಾನದಲ್ಲಿ ಮಠದ ಪೀಠಾಧ್ಯಕ್ಷರಾದ ಶ್ರೀ ಮಹಾಂತ ಶಿವಲಿಂಗ ಸ್ವಾಮೀಜಿ ನೇತೃತ್ವ ಹಾಗೂ ಜಿಲ್ಲೆಯ ಎಲ್ಲಾ ಸ್ವಾಮೀಜಿಗಳ ಸಮ್ಮುಖದಲ್ಲಿ ಮಳೆ,ಬೆಳೆ, ಪ್ರಜೆಗಳ ಕಲ್ಯಾಣಕ್ಕಾಗಿ ಅಷ್ಟೋತ್ತರ, ಅರ್ಚನೆ ಹಾಗೂ ವಿಶೇಷ ಪೂಜೆ ನೆರವೇರಿಸಿದರು.

ನಂತರ ಬಿಲ್ವ ಗೋ ಶಾಲೆಗೆ ಭೇಟಿ ನೀಡಿದ ಅವರು ಗೋವುಗಳಿಗೆ ಹಣ್ಣು ಹಂಪಲು ತಿನ್ನಿಸಿ ನಮಿಸಿದರು.
ನಂತರ ಮಾತನಾಡಿದ ಯದುವೀರ್, ಇಂದು ಸಾಕಷ್ಟು ಸವಾಲುಗಳಿವೆ. ಅವುಗಳನ್ನು ಮೆಟ್ಟಿನಿಂತು ಅಭಿವೃದ್ದಿ ಸಾಧಿಸಬೇಕಾಗಿದೆ. ಇಂದು ಲೋಕಕಲ್ಯಾಣಕ್ಕಾಗಿ ಭಗವಂತನ ಮೊರೆಹೊಕ್ಕಿದ್ದೇವೆ ಎಲ್ಲಾ ಗುರುಗಳ ಮಾರ್ಗದರ್ಶನ,ಆಶೀರ್ವಾದವಿರಲಿ ಎಂದರು.

ಈ ಸಂದರ್ಭ ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್, ಕೊಡಗು ಹಾಸನ ಮಠಾಧೀಶರ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಮುದ್ದಿನಕಟ್ಟೆ ಮಠದ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಕಾರ್ಯದರ್ಶಿ ಕಿರಿಕೂಡ್ಲಿ ಮಠದ ಸದಾಶಿವ ಸ್ವಾಮೀಜಿ, ಕಲ್ಲುಮಠದ ಮಹಾಂತ ಸ್ವಾಮೀಜಿ, ತೋಂಟದಾರ್ಯ ಸಂಸ್ಥಾನ ಮಠದ ಸ್ವತಂತ್ರ ಬಸವಲಿಂಗ ಸ್ವಾಮೀಜಿ, ತೊರೆನೂರು ಮಠದ ಮಲ್ಲೇಶ ಸ್ವಾಮೀಜಿ, ಶಿಡಿಗಳಲೆ ಮಠದ ಇಮ್ಮಡಿ ಶಿವಲಿಂಗ ಸ್ವಾಮೀಜಿ, ವಿರಕ್ತ ಮಠದ ನಿಶ್ಚಲ ನಿರಂಜನ ದೇಶಿಕೇಂದ್ರ ಸ್ವಾಮೀಜಿ, ಜವೇನಳ್ಳಿ ಮಠದ ಸ್ವಾಮೀಜಿ ಉಪಸ್ಥಿತರಿದ್ದರು.

ತಪೋಕ್ಷೇತ್ರದ ನಾಗರ ಕಟ್ಟೆ ಬಳಿಯಿಂದ ಯದುವೀರ್ ಒಡೆಯರ್ ಅವರನ್ನು ಮಂಗಳ ವಾದ್ಯ, ವೀರಗಾಸೆ ಹಾಗೂ ಪೂರ್ಣಕುಂಭ ಕಲಶದೊಂದಿಗೆ ದೇವಾಲಯಕ್ಕೆ ಕರೆತರಲಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!