ಹೊಸದಿಗಂತ ಡಿಜಿಟಲ್ ಡೆಸ್ಕ್:
ಯಶಸ್ವಿ ಜೈಸ್ವಾಲ್ ಅರ್ಧಶತಕದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ರಾಜಸ್ಥಾನ ರಾಯಲ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 173 ರನ್ ಕಲೆಹಾಕಿದ್ದು, ಆರ್‌ಸಿಬಿಗೆ ಸ್ಪರ್ಧಾತ್ಮಕ ಗುರಿ ನೀಡಿದೆ.
ಟಾಸ್ ಗೆದ್ದ ಆರ್‌ಸಿಬಿ ನಾಯಕ ರಜತ್ ಪಾಟೀದಾರ್ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಮೊದಲ ವಿಕೆಟ್‌ಗೆ ಸಂಜು ಸ್ಯಾಮ್ಸನ್ ಹಾಗೂ ಯಶಸ್ವಿ ಜೈಸ್ವಾಲ್ ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದರು. ನಾಯಕ ಸಂಜು ಸ್ಯಾಮ್ಸನ್ 19 ಎಸೆತಗಳನ್ನುಎದುರಿಸಿ 15 ರನ್ ಗಳಿಸಿ ಕೃನಾಲ್ ಪಾಂಡ್ಯಗೆ ವಿಕೆಟ್ ಒಪ್ಪಿಸಿದರು.
ಇದಾದ ಬಳಿಕ ಎರಡನೇ ವಿಕೆಟ್‌ಗೆ ಜತೆಯಾದ ಯಶಸ್ವಿ ಜೈಸ್ವಾಲ್ ಹಾಗೂ ರಿಯಾನ್ ಪರಾಗ್ ಎರಡನೇ ವಿಕೆಟ್‌ಗೆ 56 ರನ್‌ಗಳ ಜತೆಯಾಟವಾಡಿದರು. ರಿಯಾನ್ ಪರಾಗ್ 22 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 30 ರನ್ ಗಳಿಸಿ ಯಶ್ ದಯಾಳ್‌ಗೆ ವಿಕೆಟ್ ಒಪ್ಪಿಸಿದರು.
ಜೈಸ್ವಾಲ್ 47 ಎಸೆತಗಳನ್ನು ಎದುರಿಸಿ 10 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 75 ರನ್ ಗಳಿಸಿ ಜೋಶ್ ಹೇಜಲ್‌ವುಡ್‌ಗೆ ವಿಕೆಟ್ ಒಪ್ಪಿಸಿದರು.
ಧೃವ್ ಜುರೆಲ್ ಸವಾಲಿನ ಮೊತ್ತ ಕಲೆಹಾಕಲು ನೆರವಾದರು. ಧೃವ್ ಜುರೆಲ್ ಕೇವಲ 23 ಎಸೆತಗಳನ್ನು ಎದುರಿಸಿ ತಲಾ 2 ಬೌಂಡರಿ ಹಾಗೂ ಸಿಕ್ಸರ್ ಸಹಿತ 35 ರನ್ ಬಾರಿಸಿ ಅಜೇಯರಾಗುಳಿದರು.