Saturday, November 22, 2025

ಕೊತ್ತಲವಾಡಿ ಸಿನಿಮಾ ಬಗ್ಗೆ ಅಪಪ್ರಚಾರ ಆರೋಪ: ಯಶ್ ತಾಯಿ ಪುಷ್ಪಾ ದೂರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕೊತ್ತಲವಾಡಿ ಚಿತ್ರದ ಮೂಲಕ ನಿರ್ಮಾಪಕಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟ ಕನ್ನಡ ನಟ ಯಶ್‌ ತಾಯಿ ಪುಷ್ಪಲತಾ, ಚಲನಚಿತ್ರ ಪ್ರಚಾರಕ ಹರೀಶ್ ಅರಸು ಮತ್ತು ಅವರ ಸಹಚರರಿಂದ ದೊಡ್ಡ ಪ್ರಮಾಣದ ವಂಚನೆ, ಹಣ ದುರುಪಯೋಗ ಮತ್ತು ಕ್ರಿಮಿನಲ್ ಬೆದರಿಕೆ ಎದುರಾಗಿದೆ ಎಂದು ಆರೋಪಿಸಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಪುಷ್ಪಾ ಅವರು ದಾಖಲಿಸಿರುವ ಎಫ್ ಐಆರ್ ನಲ್ಲಿ, ತಮ್ಮ ಚಿತ್ರದ ಪ್ರಚಾರದ ಜವಾಬ್ದಾರಿಯನ್ನು ಹರೀಶ್ ಅವರಿಗೆ ವಹಿಸಿದ್ದೆ ಎಂದು ಹೇಳಿಕೊಂಡಿದ್ದಾರೆ, ಈ ಚಿತ್ರದ ಚಿತ್ರೀಕರಣವು ಮೇ 24, 2025 ರಿಂದ ಜುಲೈ ಮಧ್ಯದವರೆಗೆ ತಲಕಾಡು, ಗುಂಡ್ಲುಪೇಟೆ, ಮೈಸೂರು ಮತ್ತು ಚಾಮರಾಜನಗರ ಸೇರಿದಂತೆ ವಿವಿಧ ಸ್ಥಳಗಳಲ್ಲಿ ನಡೆಯಿತು. ಎರಡೂ ಕಡೆಯವರು ಚಿತ್ರದ ಪ್ರಚಾರಕ್ಕೆ 23 ಲಕ್ಷ ಖರ್ಚು ಮಾಡುವುದಾಗಿ ಒಪ್ಪಿಗೆಗೆ ಬಂದಿದ್ದರಂತೆ.

ಹರೀಶ್ ಅವರು ಕಳೆದ ಮೇ 18 ರಂದು 10 ಲಕ್ಷ ರೂಪಾಯಿ, ನಂತರ ಮೇ 21 ರಂದು 5 ಲಕ್ಷ ರೂಪಾಯಿ ಪಡೆದಿದ್ದರು. ನಂತರ ಚಿತ್ರದ ಬ್ರಾಂಡ್ ಹೆಸರನ್ನು ಬಳಸಿಕೊಂಡು ವಿವಿಧ ಚಾನೆಲ್‌ಗಳ ಮೂಲಕ ಹೆಚ್ಚುವರಿಯಾಗಿ 24 ಲಕ್ಷ ರೂಪಾಯಿ ಸಂಗ್ರಹಿಸಿದ್ದರು ಎಂದು ಪುಷ್ಪಾ ದೂರಿನಲ್ಲಿ ತಿಳಿಸಿದ್ದಾರೆ. ಒಟ್ಟಾರೆಯಾಗಿ, ಹರೀಶ್ ತನ್ನಿಂದ 64,87,700 ರೂಪಾಯಿ ಪಡೆದಿದ್ದಾರೆ, ಇದರಲ್ಲಿ ಜುಲೈ 31 ರಂದು ಮುದ್ರಣ ಮಾಧ್ಯಮ ಜಾಹೀರಾತಿಗಾಗಿ 4 ಲಕ್ಷ ರೂಪಾಯಿ ನಗದು ಸೇರಿದೆ.

ಇಷ್ಟೆಲ್ಲಾ ಹಣ ಪಡೆದುಕೊಂಡರೂ ಆಗಸ್ಟ್ 1ರಂದು ಬಿಡುಗಡೆಯಾಗಿದ್ದ ಚಿತ್ರಕ್ಕೆ ಯಾವುದೇ ಪ್ರಚಾರ ಮಾಡಿರಲಿಲ್ಲ. ಜುಲೈ 23 ರಂದು ಟ್ರೇಲರ್ ಬಿಡುಗಡೆ ಕಾರ್ಯಕ್ರಮ ನಡೆಯಿತು, ಆದರೆ ಹರೀಶ್ ಪ್ರಚಾರ ಕಾರ್ಯವನ್ನು ನಿರ್ವಹಿಸದ ಕಾರಣ ನಟರೇ ತಮ್ಮ ಸ್ವಂತ ಖರ್ಚಿನಿಂದ 21,75,000 ರೂಪಾಯಿ ಖರ್ಚು ಮಾಡಬೇಕಾಯಿತು ಎಂದು ಪುಷ್ಪಾ ಹೇಳಿಕೊಂಡಿದ್ದಾರೆ. ಹಲವಾರು ಸೋಷಿಯಲ್ ಮೀಡಿಯಾ ಮತ್ತು ಚಲನಚಿತ್ರ ಮಾಧ್ಯಮ ಪ್ರವರ್ತಕರಿಗೆ ಸಂಬಳ ನೀಡಿಲ್ಲ ಎಂದು ಕೂಡ ಆರೋಪಿಸಿದ್ದಾರೆ.

error: Content is protected !!