ಹೊಸದಿಗಂತ ವರದಿ ಚಿಕ್ಕಮಗಳೂರು:
ಕಾಫಿ ನಾಡು ಚಿಕ್ಕಮಗಳೂರು ನಗರದಲ್ಲಿ ಶನಿವಾರ ಬೆಳ್ಳಂ ಬೆಳಗ್ಗೆ ರಾಜ್ಯ ಸರ್ಕಾರದ ವಿರುದ್ಧ ಪೋಸ್ಟರುಗಳು ಸದ್ದು ಮಾಡಿವೆ.
ನಗರದ ಪ್ರವಾಸಿ ಮಂದಿರ ದ್ವಾರದ ಕಮಾನು ಗೋಡೆಗಳ ಮೇಲೆ, ತಾಲೂಕು ಕಚೇರಿ ಹಾಗೂ ತಾಲೂಕು ಪಂಚಾಯಿತಿ ಕಚೇರಿಯ ಗೋಡೆಗಳ ಮೇಲೆ ಮತ್ತು ರತ್ನಗಿರಿ ರಸ್ತೆಯಲ್ಲಿರುವ ಮೆಸ್ಕಾಂ ಕಚೇರಿಯ ಬಾಗಿಲು ಹಾಗೂ ಗೋಡೆಗಳ ಮೇಲೆ ಸರ್ಕಾರದ ವಿರುದ್ಧ ವ್ಯಂಗ್ಯ ಚಿತ್ರಗಳ ಪೋಸ್ಟರುಗಳನ್ನು ಅಂಟಿಸಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವರನ್ನು ಶ್ಯಾಡೋ ಸಿಎಂ ಎಂದು ಚಿತ್ರಿಸಲಾಗಿದೆ. ಸಿದ್ದರಾಮಯ್ಯ ಅವರ ಭಾವಚಿತ್ರದ ಹಿಂಬದಿ ಯತೀಂದ್ರ ಅವರ ನೆರಳಿನ ಚಿತ್ರವನ್ನು ಚಿತ್ರಿಸಲಾಗಿದೆ. ಮತ್ತೊಂದು ಪೋಸ್ಟರ್ ನಲ್ಲಿ ಈ ತಿಂಗಳ ಕಪ್ಪ ಎಲ್ಲಿ ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಪ್ರಶ್ನಿಸುತ್ತಿರುವಂತೆ, ಅದಕ್ಕೆ ಈಗಷ್ಟೇ ವಿದ್ಯುತ್ ಬಿಲ್ ಹೆಚ್ಚಿಸಿದ್ದೇವೆ ಇರಿ ಮೇಡಂ ಎಂದು ಇಂಧನ ಸಚಿವ ಕೆಜೆ ಜಾರ್ಜ್ ಉತ್ತರಿಸುತ್ತಿರುವಂತೆ ಪೋಸ್ಟರ್ ಹಾಕಲಾಗಿದೆ.
ಇಂಧನ ಸಚಿವರನ್ನು ಶಾಕಿಂಗ್ ಮಿನಿಸ್ಟರ್ ಎಂದು, “ವೈಎಸ್‌ಟಿ ಸಂಗ್ರಹ ಸಮಿತಿ ಸುತ್ತೋಲೆ-ಹಲೋ ಅಪ್ಪ ಆಪ್ ಡೌನ್ ಲೋಡ್ ಮಾಡಿಕೊಳ್ಳಿ ಹಾಗೂ ಪೇಮೆಂಟ್ ಮಾಡಿ” ಹಗಲು ದರೋಡೆ ರಾಜ್ಯ ಸರ್ಕಾರ, ಒಬ್ಬರಿಂದ ವಸೂಲಿ ಮಾಡಿ ಮತ್ತೊಬ್ಬರಿಗೆ ಕೊಟ್ಟು ಪ್ರಚಾರ ಪಡೆಯುವುದು ಗ್ಯಾರಂಟಿ ಯೋಜನೆ ಎನ್ನುವ ವ್ಯಂಗ್ಯಭರಿತ ಪೋಸ್ಟರುಗಳನ್ನು ಅಂಟಿಸಲಾಗಿದೆ.
ವಿಚಾರ ಗೊತ್ತಾಗುತ್ತಿದ್ದಂತೆ ಪೊಲೀಸರು ಎಲ್ಲಾ ಪೋಸ್ಟರುಗಳನ್ನು ತೆರವುಗೊಳಿಸಿ ವಶಕ್ಕೆ ಪಡೆದಿದ್ದಾರೆ.