ಕುಮಾರ ಬಂಗಾರಪ್ಪಗೆ ರಾಜಕೀಯ ಪುನರ್ಜನ್ಮ ಕೊಟ್ಟಿದ್ದೇ ಯಡಿಯೂರಪ್ಪ: ಎಂ.ಪಿ.ರೇಣುಕಾಚಾರ್ಯ

 ಹೊಸದಿಗಂತ ವರದಿ, ದಾವಣಗೆರೆ

ಕಾಂಗ್ರೆಸ್ ಪಕ್ಷದಲ್ಲಿ ಅನಾಥ ಶಿಶುವಾಗಿದ್ದ ಕುಮಾರ ಬಂಗಾರಪ್ಪಗೆ ರಾಜಕೀಯ ಪುನರ್ಜನ್ಮ ಕೊಟ್ಟಿದ್ದೇ ಬಿ.ಎಸ್.ಯಡಿಯೂರಪ್ಪನವರು. ಮಿಸ್ಟರ್ ಕುಮಾರ ಬಂಗಾರಪ್ಪನವರೇ, ನಿಮಗೆ ತಾಕತ್ತಿದ್ದರೆ ಪಕ್ಷದ ರಾಜ್ಯ ನಾಯಕತ್ವ ಬದಲಾವಣೆ ಮಾಡಿ ನೋಡೋಣ ಎಂದು ಬಿಜೆಪಿ ಮುಖಂಡ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸವಾಲು ಹಾಕಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರ್ ಬಂಗಾರಪ್ಪ ನಿಮ್ಮ ಕ್ಷೇತ್ರದಲ್ಲಿ ನೀವೇನು ಪಕ್ಷ ಸಂಘಟನೆ ಮಾಡಿದ್ದೀರಿ? ನೀವು ರಾಜ್ಯಾಧ್ಯಕ್ಷರ ಬದಲಾವಣೆ ಆಗುತ್ತದೆಂದು ಹೇಳುತ್ತೀರಾ? ನೀವೇನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾ? ಸೂರ್ಯ-ಚಂದ್ರರು ಇರುವುದು ಎಷ್ಟು ಸತ್ಯವೋ ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಮುಂದುವರೆಯುವುದೂ ಅಷ್ಟೇ ಸತ್ಯ. ಬಿ.ವೈ.ವಿಜಯೇಂದ್ರರೇ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮುಂದುವರಿಯುವ ಜೊತೆಗೆ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಹಾಗೂ ಮುಂದಿನ ವಿಧಾನಸಭೆ ಚುನಾವಣೆಯ ಸಾರಥ್ಯವನ್ನೂ ವಹಿಸುತ್ತಾರೆ ಎಂದರು.

ಲೂಸ್ ಟಾಕಿಂಗ್ ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ರಿಗೆ ಅವರಿವರನ್ನು ಬೈಯ್ಯುವುದೇ ಕೆಲಸವಾಗಿದೆ. ಬಿಜೆಪಿ ಮೇಲೆ ಅಭಿಮಾನವಿದ್ದಿದ್ದರೆ ಹೀಗೆಲ್ಲಾ ಹಾದಿಬೀದಿಯಲ್ಲಿ ಮಾತನಾಡಬಾರದು. ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷರು ನೋಟೀಸ್ ನೀಡಿದರೆ ಅದನ್ನೇ ಫೇಕ್ ನೋಟೀಸ್ ಅಂತಾ ಹೇಳಿದ ಯತ್ನಾಳ್ ಗೆ ವಿಜಯೇಂದ್ರ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ? ನಿಮ್ಮ ಕ್ಷೇತ್ರವಾಗಿರುವ ಬಬಲೇಶ್ವರದಿಂದ ಸ್ಪರ್ಧೆ ಮಾಡಿ. ಅದನ್ನು ಬಿಟ್ಟು ಪ್ರಭಾವಿ ಸಚಿವರ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದೀರಾ? ಕುಟುಂಬ ರಾಜಕಾರಣ ಅಂತಾ ಮಾತನಾಡುತ್ತೀರಾ? ನಿಮ್ಮ ಮಕ್ಕಳನ್ನ ಸರ್ಕಾರಿ ಕಾರ್ಯಕ್ರಮದಲ್ಲಿ ಕರೆ ತರುತ್ತೀರಾ ಎಂದು ಅವರು ವಾಗ್ದಾಳಿ ನಡೆಸಿದರು.

ನಾವೆಲ್ಲಾ ಮೊನ್ನೆ ಫೆ.12ರಂದು ಸಭೆ ಆಯೋಜನೆ ಮಾಡಿದ್ದೆವು. ಆದರೆ, ರಾಜ್ಯಾಧ್ಯಕ್ಷರು ಬೇಡ ಅಂದಿದ್ದಕ್ಕೆ ನಾವೆಲ್ಲರೂ ಸುಮ್ಮನಾದೆವು. ನಾವು ಪಕ್ಷ, ಅಧ್ಯಕ್ಷರಿಗೆ ಗೌರವ ನೀಡುತ್ತೇವೆ. ಹಾಗಾಗಿ ಸಭೆಯನ್ನು ಮಾಡಲಿಲ್ಲ. ಯಾವುದೇ ಸಮಾವೇಶ ಆಯೋಜಿಸದಂತೆ ನಮ್ಮ ರಾಜ್ಯಾಧ್ಯಕ್ಷರು ಸೂಚನೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲರೂ ಸೇರಿಕೊಂಡು, ದಿನಾಂಕ ನಿಗಧಿಪಡಿಸಿ, ಸಮಾವೇಶ ಆಯೋಜಿಸುತ್ತೇವೆ ಎಂದು ಅವರು ಯಡಿಯೂರಪ್ಪನವರ ಜನ್ಮದಿನ ಆಚರಣೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಪಕ್ಷದ ಮುಖಂಡರಾದ ರಾಜು ವೀರಣ್ಣ, ಪ್ರವೀಣರಾವ್ ಜಾಧವ್ ಇತರರು ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!