Sunday, January 11, 2026

ಯಲ್ಲಾಪುರ ಹತ್ಯೆ ಪ್ರಕರಣ: ಆರೋಪಿ ಪಾತಾಳದಲ್ಲಿದ್ದರೂ ಎಳೆದು ತನ್ನಿ: ಶಿವರಾಮ ಹೆಬ್ಬಾರ್ ಆದೇಶ

ಹೊಸದಿಗಂತ ಯಲ್ಲಾಪುರ:

ಯಲ್ಲಾಪುರ ಪಟ್ಟಣದ ಕಾಳಮ್ಮನಗರದಲ್ಲಿ ಅಮಾಯಕ ಹೆಣ್ಣುಮಗಳು ರಂಜಿತಾ ಬನಸೋಡೆ ಅವರ ಭೀಕರ ಹತ್ಯೆ ನಡೆದಿರುವುದು ಅತ್ಯಂತ ಖಂಡನೀಯ ಮತ್ತು ನಾಗರಿಕ ಸಮಾಜ ತಲೆತಗ್ಗಿಸುವಂತಹ ಅಮಾನವೀಯ ಕೃತ್ಯವಾಗಿದೆ. ಯಲ್ಲಾಪುರದ ಇತಿಹಾಸದಲ್ಲೇ ಇಂತಹ ಕ್ರೂರ ಘಟನೆ ಕಂಡಿರಲಿಲ್ಲ ಎಂದು ಶಿವರಾಮ ಹೆಬ್ಬಾರ್ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಘಟನೆ ಸಂಭವಿಸಿದ ತಕ್ಷಣ ಪಟ್ಟಣದ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿರುವುದಾಗಿ ಅವರು ತಿಳಿಸಿದರು. ಈ ಸಭೆಯಲ್ಲಿ ಆರೋಪಿಯನ್ನು ಯಾವುದೇ ಕಾರಣಕ್ಕೂ ತಪ್ಪಿಸದೆ ಅತ್ಯಂತ ಶೀಘ್ರದಲ್ಲಿ ಬಂಧಿಸಿ, ಕಾನೂನಿನಡಿ ಕಠಿಣ ಹಾಗೂ ಮಾದರಿ ಶಿಕ್ಷೆ ವಿಧಿಸಬೇಕೆಂದು ನಿರ್ದೇಶನಗಳನ್ನು ನೀಡಿದ್ದಾರೆ. ಇಂತಹ ಕ್ರೂರ ಕೃತ್ಯ ಎಸಗಿದವರ ವಿರುದ್ಧ ಪೊಲೀಸರು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು; ಯಾವುದೇ ರಾಜಿ, ವಿಳಂಬ ಅಥವಾ ಸಡಿಲಿಕೆ ಸಹಿಸಿಕೊಳ್ಳುವುದಿಲ್ಲ ಎಂದು ಅವರು ಕಟ್ಟುನಿಟ್ಟಾಗಿ ಎಚ್ಚರಿಸಿದರು.

ಮೃತ ರಂಜಿತಾ ಬನಸೋಡೆ ಅವರ ಕುಟುಂಬಕ್ಕೆ ಸಮಾಜ ಕಲ್ಯಾಣ ಇಲಾಖೆಯಿಂದ ತಕ್ಷಣ ಸೂಕ್ತ ಪರಿಹಾರ ಒದಗಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಶಾಸಕರು ಹೇಳಿದರು.

ಯಲ್ಲಾಪುರದ ಸಾರ್ವಜನಿಕರು ಶಾಂತಿ ಮತ್ತು ಸಂಯಮವನ್ನು ಕಾಪಾಡಿಕೊಳ್ಳಬೇಕು; ಪೊಲೀಸ್ ಇಲಾಖೆ ಈಗಾಗಲೇ ಆರೋಪಿಯನ್ನು ಬಂಧಿಸುವ ಕಾರ್ಯದಲ್ಲಿ ಸಂಪೂರ್ಣ ತೊಡಗಿಸಿಕೊಂಡಿದ್ದು, ಯಾರೂ ಭಯಪಡುವ ಅಗತ್ಯವಿಲ್ಲ ಎಂದು ಅವರು ಮನವಿ ಮಾಡಿದರು. ಕಾನೂನು ಕೈಗೊಳ್ಳುವ ಕ್ರಮದಿಂದ ತಪ್ಪಿತಸ್ಥರು ತಪ್ಪಿಸಿಕೊಳ್ಳಲಾರರು; ನ್ಯಾಯ ಖಂಡಿತವಾಗಿಯೂ ಸ್ಥಾಪನೆಯಾಗಲಿದೆ ಎಂದು ಶಾಸಕರು ದೃಢವಾಗಿ ಹೇಳಿದರು.

error: Content is protected !!