March 22, 2026
Sunday, March 22, 2026
spot_img

ಯಲ್ಲಾಪುರ ಪೊಲೀಸರ ಭರ್ಜರಿ ಬೇಟೆ: ಶಿರಸಿ ಜಾತ್ರೆಯಲ್ಲಿ ದರೋಡೆಗೆ ಸ್ಕೆಚ್ ಹಾಕಿದ್ದ 8 ಮಂದಿ ಅರೆಸ್ಟ್!

ಹೊಸದಿಗಂತ ಯಲ್ಲಾಪುರ:

ಜಿಲ್ಲೆಯ ಸುಪ್ರಸಿದ್ಧ ಶಿರಸಿ ಮಾರಿಕಾಂಬಾ ಜಾತ್ರೆಯ ಸಂಭ್ರಮದ ನಡುವೆಯೇ ಕಳ್ಳತನ ಹಾಗೂ ದರೋಡೆಗೆ ಸಂಚು ರೂಪಿಸಿದ್ದ ಮಹಾರಾಷ್ಟ್ರ ಮೂಲದ ಕುಖ್ಯಾತ ಅಂತರ್ ರಾಜ್ಯ ದರೋಡೆಕೋರರ ತಂಡವನ್ನ ಯಲ್ಲಾಪುರ ಪೊಲೀಸರು ಸಿನಿಮೀಯ ಶೈಲಿಯಲ್ಲಿ ಬಂಧಿಸಿದ್ದಾರೆ.

ಹುಬ್ಬಳ್ಳಿ ರಸ್ತೆಯ ಕೆ.ಮಿಲನ್ ಹೋಟೆಲ್ ಬಳಿ ಸಂಶಯಾಸ್ಪದವಾಗಿ ಓಡಾಡುತ್ತಿದ್ದ ತಂಡದ ಬಗ್ಗೆ ಖಚಿತ ಮಾಹಿತಿ ಪಡೆದ ಪಿಎಸ್‌ಐ ಸಿದ್ದಪ್ಪ ಗುಡಿ ನೇತೃತ್ವದ ತಂಡ ಬುಧವಾರ ನಸುಕಿನ ಜಾವ ದಾಳಿ ನಡೆಸಿದೆ. ಈ ವೇಳೆ ಪುಣೆ ಮೂಲದ ಉಮೇಶ ರಾಮಾ ಗಾಯಕವಾಡ, ಶ್ರೀನಾಥ ಶಂಕರ ಜಾದವ ಸೇರಿದಂತೆ ಒಟ್ಟು ಎಂಟು ಜನರನ್ನು (ಆರು ಪುರುಷರು ಹಾಗೂ ಇಬ್ಬರು ಮಹಿಳೆಯರು) ವಶಕ್ಕೆ ಪಡೆಯಲಾಗಿದೆ.

ಬಂಧಿತರು ದಕ್ಷಿಣ ಭಾರತದ ಪ್ರಸಿದ್ಧ ಪ್ರವಾಸಿ ತಾಣ ಹಾಗೂ ಜಾತ್ರೆಗಳನ್ನೇ ಗುರಿಯಾಗಿಸಿಕೊಂಡು ಕೃತ್ಯ ಎಸಗುತ್ತಿದ್ದರು. ವಿಚಾರಣೆ ವೇಳೆ, ಶಿರಸಿ ಮಾರಿಕಾಂಬಾ ಜಾತ್ರೆಯಲ್ಲಿ ದರೋಡೆ ನಡೆಸಲು ಹೋಗುತ್ತಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಈ ತಂಡವು ಕಳೆದ 3-4 ವರ್ಷಗಳಿಂದ ದಕ್ಷಿಣ ಭಾರತದಾದ್ಯಂತ ಸಕ್ರಿಯವಾಗಿದ್ದು, ಗೋಕರ್ಣ ಮತ್ತು ಮುರ್ಡೇಶ್ವರದಲ್ಲೂ ಈ ಹಿಂದೆ ಕೈಚಳಕ ತೋರಿಸಿದ್ದರು ಎಂಬ ಭಯಾನಕ ಸತ್ಯ ಬಯಲಾಗಿದೆ.

ಬಂಧಿತರಿಂದ ಮಾರುತಿ ಎರ್ಟಿಗಾ ಕಾರು, ಕಬ್ಬಿಣದ ರಾಡ್‌ಗಳು, ಮಂಕಿ ಕ್ಯಾಪ್, ಖಾರದ ಪುಡಿ ಪ್ಯಾಕೆಟ್‌ಗಳು ಹಾಗೂ ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಹಿಡಿಯಲು ಹೋದರೆ ಕಲ್ಲಿನಿಂದ ಹಲ್ಲೆ ಮಾಡುವಷ್ಟು ಕ್ರೂರ ಸ್ವಭಾವದವರಾಗಿದ್ದ ಈ ತಂಡವನ್ನು ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಸಿಪಿಐ ರಮೇಶ ಹನಾಪೂರ ಅವರ ಮಾರ್ಗದರ್ಶನದಲ್ಲಿ ನಡೆದ ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಪಿಎಸ್‌ಐಗಳಾದ ರಾಜಶೇಖರ ವಂದಲಿ, ಸಿದ್ದಪ್ಪ ಗುಡಿ, ಅನೀಲ್ ಮಾದರ ಹಾಗೂ ಸಿಬ್ಬಂದಿಗಳ ತಂಡ ಭಾಗವಹಿಸಿತ್ತು. ಸಾರ್ವಜನಿಕ ವಲಯದಲ್ಲಿ ಪೊಲೀಸರ ಈ ಸಮಯಪ್ರಜ್ಞೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !