ಹೊಸದಿಗಂತ ವರದಿ, ಮಡಿಕೇರಿ:
ಯೋಗ ಮತ್ತು ಪರಿಸರ ಜಾಗೃತಿ ಮೂಡಿಸುವ ಸಲುವಾಗಿ ಮೈಸೂರಿನ ಕುವೆಂಪು ನಗರದ ನಿವಾಸಿ ಕೃಷ್ಣ ನಾಯಕ್ ಅವರು ಮೈಸೂರಿನಿಂದ ಕಾಶ್ಮೀರದವರೆಗೆ ಕಾಲ್ನಡಿಗೆ ಯಾತ್ರೆ ಪ್ರಾರಂಭಿಸಿದ್ದು, ಶುಕ್ರವಾರ ಕುಶಾಲನಗರದ ಮೂಲಕ ಕೊಡಗು ಜಿಲ್ಲೆಗೆ ಪ್ರವೇಶಿಸಿದ್ದಾರೆ.
ತಾನು ಸಾಗುವ ದಾರಿಯುದ್ದಕ್ಕೂ ಸೀಡ್ ಬಾಲ್ ಗಳನ್ನು ಹಾಕುವ ಮೂಲಕ ಮತ್ತು ಗಿಡಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆ ಮಾಡುವ ಉದ್ದೇಶವನ್ನು ಹೊಂದಿರುವ ಕೃಷ್ಣ ನಾಯಕ್, ದಾರಿಯಲ್ಲಿ ಸಿಗುವ ಶಾಲೆಗಳಿಗೆ ಭೇಟಿ ಕೊಟ್ಟು ವಿದ್ಯಾರ್ಥಿಗಳಿಗೆ ಯೋಗ ಶಿಕ್ಷಣವನ್ನು ಅಥವಾ ಯೋಗದ ವಿವರಗಳನ್ನು ಮತ್ತು ಪರಿಸರ ಸಂರಕ್ಷಣೆಯ ವಿಚಾರವಾಗಿ ಮಾತನಾಡಲಿದ್ದಾರೆ. ಅ.16ರಂದು ಮೈಸೂರಿನ ಕೋಟೆ ಆಂಜನೇಯ ದೇವಸ್ಥಾನದ ಬಳಿಯಿಂದ ಕಾಲ್ನಡಿಗೆ ಪ್ರಯಾಣ ಆರಂಭಿಸಿರುವ ಅವರು ಅ.22ರಂದು ಸಂಪಾಜೆ,ಸುಳ್ಯ, ಕಾಸರಗೋಡು ಮೂಲಕ ಕೇರಳಕ್ಕೆ ಪ್ರವೇಶಿಸಲಿದ್ದಾರೆ.
ಕಾಸರಗೋಡಿನಿಂದ ಕೊಝೀಕೋಡು, ತಿರುವನಂತಪುರ, ಕನ್ಯಾಕುಮಾರಿ, ಮಧುರೈ, ತಂಜಾವೂರು, ಪುದುಚೇರಿ ಚೆನ್ನೈ, ಹೈದರಾಬಾದ್, ವಿಶಾಖಪಟ್ಟಣ ಭುವನೇಶ್ವರ್, ಕೊಲ್ಕತ್ತಾ, ತ್ರಿಪುರಾ, ಅಗರ್ತಲ, ಕೊಹಿಮ,ಇಟಾನಗರ,ಗುವಾಹಟಿ, ಗಯಾ,ಪ್ರಯಾಗ್ ರಾಜ್, ಲಕ್ನೋ, ಆಗ್ರಾ, ಹರಿದ್ವಾರ, ಮೂಲಕ ಜಮ್ಮು ಕಾಶ್ಮೀರಕ್ಕೆ ತೆರಳಲಿದ್ದು, ನಂತರ ಬೆಂಗಳೂರಿಗೆ ವಾಪಾಸಾಗಲಿದ್ದಾರೆ.
ಸುಮಾರು 18 ಸಾವಿರದಿಂದ 20ಸಾವಿರ ಕಿಲೋಮೀಟರ್‌ಗಳ ಕಾಲ್ನಡಿಗೆಯಲ್ಲಿ 28 ರಾಜ್ಯಗಳ ಪ್ರಮುಖ ಪಟ್ಟಣಗಳನ್ನು ಮೂರು ತಿಂಗಳುಗಳ ಕಾಲ ಪ್ರಯಾಣ ಮಾಡಿ ಭೇಟಿ ಮಾಡುವ ಉದ್ದೇಶದಿಂದ ಹೊರಟಿರುವ ಇವರು, ಭಾಷಾವಾರು ರಾಜ್ಯಗಳಾಗಿ ವಿಂಗಡಿಸಿರುವ ದೇಶವನ್ನು ಯೋಗದ ಮೂಲಕ ಒಂದು ಮಾಡುವ ಯೋಜನೆ ಇಟ್ಟುಕೊಂಡಿದ್ದಾರೆ.
ಈ ಹಿಂದೆ ಇವರು ಇದೇ ಉದ್ದೇಶದಿಂದ ಮೈಸೂರಿನಿಂದ ಕಾಶಿಯವರೆಗೆ 2500 ಕಿಲೋಮೀಟರ್’ಗಳ ಕಾಲ್ನಡಿಗೆ ಯಾತ್ರೆಯನ್ನು 56 ದಿನಗಳಲ್ಲಿ ಮುಗಿಸಿದ್ದರು.
ಇವರು ಕೊಡಗಿಗೆ ಆಗಮಿಸುವ ದಾರಿಯಲ್ಲಿ ಇವರನ್ನು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ ಪಿ ಕೇಶವ ಕಾಮತ್, ಮಾಜಿ ಅಧ್ಯಕ್ಷ ಟಿ. ಪಿ. ರಮೇಶ್, ಗೌರವ ಕಾರ್ಯದರ್ಶಿ ಎಸ್ .ಐ .ಮುನೀರ್ ಅಹ್ಮದ್, ಜಿಲ್ಲಾ ವಿಶೇಷ ಆಹ್ವಾನಿತ ವಿ .ಟಿ ಮಂಜುನಾಥ್ ಭೇಟಿಯಾಗಿ ಶುಭ ಕೋರಿದರು.
ಇವರ ಈ ಪ್ರಯಾಣವನ್ನು ಪ್ರಾರಂಭಿಸುವ ಸಂದರ್ಭದಲ್ಲಿ ಖ್ಯಾತ ಯೋಗ ಗುರು ಡಾ. ರಾಘವೇಂದ್ರ ಪೈ ಮತ್ತು ಖ್ಯಾತ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಉಪಸ್ಥಿತರಿದ್ದು, ಶುಭ ಹಾರೈಸಿದರು