ಹೊಸದಿಗಂತ ವರದಿ ಉಳ್ಳಾಲ:
ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರ ಹೆಸರಲ್ಲಿ ಅರ್ಹ ಅಶಕ್ತ ಕುಟುಂಬಗಳಿಗೆ ಬಿಜೆಪಿ ಮುಖಂಡ ಸಂತೋಷ್ ಬೋಳಿಯಾರ್ ರೈ ಆರು ಮನೆಗಳನ್ನ ನಿರ್ಮಿಸಿಕೊಟ್ಟಿದ್ದಾರೆ. ಈ ಒಳ್ಳೆಯ ಕೆಲಸ ಮುಂದುವರಿದಿದ್ದು, ಇದೀಗ ಏಳನೇ ಮನೆಗೆ ಶಿಲಾನ್ಯಾಸ ನಡೆಸಲಾಗಿದೆ.
ಅಡ್ಕ ಶ್ರೀ ಭಗವತಿ ಕ್ಷೇತ್ರದ ದರ್ಶನ ಪಾತ್ರಿ ಶ್ರವಣ್ ಬೆಳ್ಚಪ್ಪಾಡ ಅವರ ಕುಟುಂಬಕ್ಕೆ ಏಳನೇ “ನಮೋ ಕುಟೀರ” ನಿರ್ಮಾಣಕ್ಕೆ ಶಿಲಾನ್ಯಾಸ ನಡೆಸಲಾಗಿದ್ದು, ಫಲಾನುಭವಿ ದಂಪತಿಯ ಮುಖದಲ್ಲಿ ಮೂಡಿದ ಮಂದಹಾಸವೇ ನನ್ನ ಕುಟುಂಬಕ್ಕೆ ಶ್ರೀರಕ್ಷೆಯಾಗಿದೆಯೆಂದು ಬಿಜೆಪಿ ಮುಖಂಡರು ಹಾಗೂ ದಿ.ಮೈಸೂರು ಇಲೆಕ್ಟ್ರಿಕಲ್ಸ್ (ಲಿ)ನ ನಿಕಟಪೂರ್ವ ಅಧ್ಯಕ್ಷರಾದ ಸಂತೋಷ್ ಕುಮಾರ್ ರೈ ಬೋಳಿಯಾರ್ ಹೇಳಿದರು.

ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯ ಅಡ್ಕದಲ್ಲಿರುವ ದೊಡ್ಡಮನೆ ತರವಾಡು ಫಲಾನುಭವಿಗಳ ನಿವೇಶನದಲ್ಲಿ ಅಡ್ಕ ಭಗವತಿ ಕ್ಷೇತ್ರದ ಸ್ಥಾನಿಕರು ಹಾಗೂ ದರ್ಶನ ಪಾತ್ರಿಗಳಾದ ಶ್ರವಣ್ ಬೆಳ್ಚಪ್ಪಾಡ ಅವರ ಕುಟುಂಬಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಹೆಸರಲ್ಲಿ ನಿರ್ಮಿಸಿ ಕೊಡುತ್ತಿರುವ ಏಳನೇ(ನಮೋ ಕುಟೀರ)ಮನೆಗೆ ಗುರುವಾರದಂದು ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ಹೊಸ ಮನೆಯಲ್ಲಿ ಸಂತೋಷ, ನೆಮ್ಮದಿ ತುಂಬಿರಲಿ
ದಾನ ಕೊಡಲು ಮತ್ತು ಪಡೆಯಲು ನಮಗೆ ಯೋಗವಿರಬೇಕಷ್ಟೆ.ಇಲ್ಲಿ ಅತಿ ಶೀಘ್ರದಲ್ಲೇ ಸುಂದರವಾದ ಮನೆಯನ್ನು ನಿರ್ಮಿಸಿ,ವಾಸ್ತು ಪೂಜೆ, ಗಣ ಹೋಮ, ಊಟೋಪಚಾರವುಳ್ಳ ಸಂಭ್ರಮದ ಗೃಹಪ್ರವೇಶ ಸಮಾರಂಭವನ್ನು ನಡೆಸಲಾಗುವುದು. ಮನೆಯ ಶಿಲಾನ್ಯಾಸದಿಂದ ಹಿಡಿದು ಗೃಹ ಪ್ರವೇಶದ ಸಂಪೂರ್ಣ ಖರ್ಚನ್ನು ವೈಯಕ್ತಿಕ ನೆಲೆಯಲ್ಲಿ ಭರಿಸಲಾಗುವುದು. ನೂತನ ನಿರ್ಮಾಣಗೊಳ್ಳುವ ಮನೆಯಲ್ಲಿ ಶ್ರವಣ್ ಗುರಿಕಾರರ ಕುಟುಂಬವು ಸಂತೋಷ, ನೆಮ್ಮದಿಯಿಂದ ಬಾಳುವಂತಾಗಲಿ.
ದೇವರು ಹರಸಿದರೆ ಇನ್ನಷ್ಟು ಸಹಾಯ ಮಾಡ್ತೇನೆ
ಕುರ್ನಾಡು ಗ್ರಾಮದ ಅಬೆಮಾರ್ ಎಂಬಲ್ಲಿ ರುಕ್ಮಯ ಮತ್ತು ವಿಜಯ ಎಂಬ ಮಕ್ಕಳಿಲ್ಲದ ವೃದ್ಧ ದಂಪತಿಗೆ ನಿರ್ಮಿಸಲಾದ ಮನೆಯು ಕೇವಲ ಎರಡೂವರೆ ತಿಂಗಳಲ್ಲೇ ಸಂಪೂರ್ಣಗೊಂಡಿದೆ. ನೂತನ ಮನೆಯ ಗೃಹ ಪ್ರವೇಶವು ಇದೇ ಫೆ.25 ನೇ ತಾರೀಕಿನಂದು ನಡೆಯಲಿದೆ. ಅರ್ಹ ಹತ್ತು ಅಶಕ್ತ ಕುಟುಂಬಗಳಿಗೆ ನಮೋ ಕುಟೀರಗಳ ನಿರ್ಮಾಣ ಯೋಜನೆಯನ್ನು ಹಮ್ಮಿಕೊಂಡಿದ್ದು ಅತಿ ಶೀಘ್ರವಾಗಿ ಮತ್ತೆ ಮೂರು ಮನೆಗಳ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ ನೆರೆವೇರಿಸಲಾಗುವುದು. ದೇವರು ಹರಸಿದರೆ ಮತ್ತಷ್ಟು ಸಮಾಜಮುಖಿ ಕಾರ್ಯಗಳನ್ನ ಮುಂದುವರೆಸುವುದಾಗಿ ಸಂತೋಷ್ ಬೋಳಿಯಾರು ಹೇಳಿದರು.
ಯಾರೆಲ್ಲ ಇದ್ದರು?
ಕೋಟೆಕಾರು ನೆಲ್ಲಿಸ್ಥಳ ಶ್ರೀ ಕಾಳಿಕಾಂಬ ಕ್ಷೇತ್ರದ ಅಧ್ಯಕ್ಷರಾದ ಸುಂದರ್ ಆಚಾರ್ಯ ಅವರ ಪೌರೋಹಿತ್ಯದಲ್ಲಿ ನೂತನ ಮನೆ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ ನೆರವೇರಿತು. ಅಡ್ಕ ಶ್ರೀ ಭಗವತಿ ಕ್ಷೇತ್ರದ ಮೂಲ ಅರ್ಚಕರಾದ ವಸಂತ ಪೂಜಾರಿ,ದರ್ಶನ ಪಾತ್ರಿ ನವೀನ್ ಬೆಳ್ಚಪ್ಪಾಡ,ಅಶೋಕ್ ಕಾರ್ನವರ್,ರಾಜ ಕಾರ್ನವರ್,ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಕಾರ್ಯವಾಹ ನಾಗೇಶ್ ಕುಂಪಲ,ಕೋಟೆಕಾರು ಪ.ಪಂ ಅಧ್ಯಕ್ಷರಾದ ದಿವ್ಯ ಶೆಟ್ಟಿ,ಉಪಾಧ್ಯಕ್ಷರಾದ ಪ್ರವೀಣ್ ಐ.ಬಗಂಬಿಲ,ಪ.ಪಂ ಸದಸ್ಯರಾದ ಸುಜಿತ್ ಮಾಡೂರು,ರಾಘವ ಗಟ್ಟಿ,ಸೋಮೇಶ್ವರ ಪುರಸಭೆ ಉಪಾಧ್ಯಕ್ಷರಾದ ರವಿಶಂಕರ್ ಸೋಮೇಶ್ವರ,ಸ್ಥಾಯಿ ಸಮಿತಿ ಅಧ್ಯಕ್ಷರಾದ ಪುರುಷೋತ್ತಮ ಗಟ್ಟಿ ಪರ್ಯತ್ತೂರು,ಸದಸ್ಯರಾದ ಜಯಶ್ರೀ ಉಚ್ಚಿಲ್,ಪ್ರಮುಖರಾದ ನಾರಾಯಣ ಕುಂಪಲ,ಸಮ್ಯಕ್ತ್ ರೈ ಬೋಳಿಯಾರ್,ರಾಜೇಶ್ ಮಡಿವಾಳ ಮೊದಲಾದವರು ಉಪಸ್ಥಿತರಿದ್ದರು.



