ಹೊಸದಿಗಂತ ಡಿಜಿಟಲ್ ಡೆಸ್ಕ್:
ದಾನವೀರ ಭಾಮಾಶಾ ಜಯಂತಿ ಹಾಗೂ ವ್ಯಾಪಾರಿ ಕಲ್ಯಾಣ ದಿವಸದ ಅಂಗವಾಗಿ ಲಕ್ನೋದಲ್ಲಿನ ಲೋಕಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜಾತಿವಾದ ಹಾಗೂ ವೋಟ್ ಬ್ಯಾಂಕ್ ರಾಜಕಾರಣದ ವಿರುದ್ಧ ಕಿಡಿಕಾರಿದರು. ಜಾತಿಯ ಹೆಸರಿನಲ್ಲಿ ಸಮಾಜವನ್ನು ಒಡೆಯುವವರು ಹಿಂದೆ ಮಾಫಿಯಾಗಳಿಗೆ ಹೆದರಿದವರಾಗಿದ್ದು, ಇಂದಿಗೂ ಸಮಾಜದಲ್ಲಿ ಭೇದ ಹುಟ್ಟಿಸುತ್ತಿದ್ದಾರೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ವ್ಯಾಪಾರಿಗಳು ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ ಎಂಬ ಅಭಿಪ್ರಾಯವನ್ನು ಹಂಚಿಕೊಂಡ ಯೋಗಿ, ಭಾಮಾಶಾ ಅವರ ತ್ಯಾಗವನ್ನು ಸ್ಮರಿಸಿ, “ದೇಶದಿಂದ ಬಂದ ಸಂಪತ್ತು ದೇಶಕ್ಕೆ ನೀಡುವುದೇ ನಿಜವಾದ ದಾನ” ಎಂದು ಹೇಳಿದರು. ಮಹಾರಾಣಾ ಪ್ರತಾಪ್‌ಗೆ ಎಲ್ಲಾ ಆಸ್ತಿ ಕೊಟ್ಟು ಮೇವಾಡ್ ಅನ್ನು ಕಾಪಾಡಿದ ಭಾಮಾಶಾ ಆದರ್ಶವನ್ನು ಪಾಲಿಸಬೇಕು ಎಂಬ ಆಶಯ ವ್ಯಕ್ತಪಡಿಸಿದರು.
ವ್ಯಾಪಾರಿಗಳ ಕಲ್ಯಾಣಕ್ಕಾಗಿ ಸರ್ಕಾರ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದ ಯೋಗಿ, ಪ್ರತಿವರ್ಷ ಪ್ರತಿ ಜಿಲ್ಲೆಯಲ್ಲಿ ವ್ಯಾಪಾರಿ ಕಲ್ಯಾಣ ದಿನ ಆಚರಿಸಲು ಸೂಚನೆ ನೀಡಿದರು. ಅತೀ ಹೆಚ್ಚು GST ಪಾವತಿಸುವ ವ್ಯಾಪಾರಿಗಳನ್ನು ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಸನ್ಮಾನಿಸುವ ನಿರ್ಧಾರ ಪ್ರಕಟಿಸಿದರು. ಅಪಘಾತಕ್ಕೊಳಗಾದ ವ್ಯಾಪಾರಿಗಳಿಗೆ 10 ಲಕ್ಷ ರೂ. ಹಣ ಸಹಾಯದ ಘೋಷಣೆಯೂ ಮಾಡಿದರು.