ಹೊಸದಿಗಂತ ಡಿಜಿಟಲ್ ಡೆಸ್ಕ್:
ಯುಜಿಸಿ ನೆಟ್ ಪ್ರಶ್ನೆಪತ್ರಿಕೆ ಸೋರಿಕೆ ದೇಶದಲ್ಲಿ ಸಾಕಷ್ಟು ಕೋಲಾಹಲ ಎದ್ದಿದೆ. ಈ ಬೆನ್ನಲ್ಲೇ ಸರ್ಕಾರಿ ಪರೀಕ್ಷೆಗಳಲ್ಲಿ ಅಕ್ರಮಗಳನ್ನು ನಿಲ್ಲಿಸಲು ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ದೊಡ್ಡ ಹೆಜ್ಜೆ ಇಟ್ಟಿದೆ.
ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಸುಗ್ರೀವಾಜ್ಞೆಗೆ ಪ್ರಸ್ತಾವನೆಯನ್ನು ತಂದಿದೆ. ಈ ಸುಗ್ರೀವಾಜ್ಞೆಯ ಪ್ರಸ್ತಾವನೆಗೆ ಸಂಪುಟ ಸಭೆಯಲ್ಲೂ ಅನುಮೋದನೆ ನೀಡಲಾಗಿದೆ. ಈ ಸುಗ್ರೀವಾಜ್ಞೆಯು ಎಲ್ಲಾ ಸಾರ್ವಜನಿಕ ಸೇವಾ ನೇಮಕಾತಿ ಪರೀಕ್ಷೆಗಳು, ಕ್ರಮಬದ್ಧಗೊಳಿಸುವಿಕೆ ಅಥವಾ ಬಡ್ತಿ ಪರೀಕ್ಷೆಗಳು, ಪದವಿ ಡಿಪ್ಲೋಮಾಗಳಿಗೆ ಪ್ರವೇಶ ಪರೀಕ್ಷೆಗಳು, ಪ್ರಮಾಣಪತ್ರಗಳು ಅಥವಾ ಶೈಕ್ಷಣಿಕ ಪ್ರಮಾಣಪತ್ರಗಳಿಗೆ ಅನ್ವಯಿಸುತ್ತದೆ ಎಂದು ಸರ್ಕಾರ ಹೇಳಿದೆ.
ನಕಲಿ ಪ್ರಶ್ನೆಪತ್ರಿಕೆಗಳನ್ನು ವಿತರಿಸುವುದು ಮತ್ತು ನಕಲಿ ಉದ್ಯೋಗ ವೆಬ್‌ಸೈಟ್‌ಗಳನ್ನು ನಡೆಸುವುದು ಸಹ ಶಿಕ್ಷಾರ್ಹ ಅಪರಾಧವಾಗಿದೆ. ಕಾಯಿದೆಯ ನಿಬಂಧನೆಗಳನ್ನು ಉಲ್ಲಂಘಿಸಿದರೆ 2 ವರ್ಷದಿಂದ ಜೀವಾವಧಿ ಶಿಕ್ಷೆ ಮತ್ತು 1 ಕೋಟಿ ರೂ.ವರೆಗೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಲಾಗಿದೆ.
ಪೇಪರ್ ಸೋರಿಕೆ ಅಥವಾ ಇತರ ಕಾರಣಗಳು ಪರೀಕ್ಷೆ ಮೇಲೆ ಪರಿಣಾಮ ಬೀರಿದರೆ, ಕಾರಣರಾದವರಿಂದಲೇ ಅದಕ್ಕೆ ತಗಲುವ ವೆಚ್ಚವನ್ನು ವಸೂಲಿ ಮಾಡುವ ಮೂಲಕ ಸರಿದೂಗಿಸಲಾಗುತ್ತದೆ. ಅಲ್ಲದೆ ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾಗಿರುವ ಕಂಪನಿಗಳು ಮತ್ತು ಸೇವಾ ಪೂರೈಕೆದಾರರನ್ನು ಶಾಶ್ವತವಾಗಿ ಕಪ್ಪು ಪಟ್ಟಿಗೆ ಸೇರಿಸಲಾಗುತ್ತದೆ ಎಂದು ಯುಪಿ ಸರ್ಕಾರ ಹೇಳಿದೆ.