ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಉತ್ತರಕಾಶಿಯ ಧರಾಲಿಯಲ್ಲಿ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರಿಗೆ ಮಹಿಳೆಯೊಬ್ಬರು ತಮ್ಮ ದುಪ್ಪಟ್ಟಾ ಹರಿದು ರಾಖಿ ಕಟ್ಟಿದ ವಿಶೇಷ ಘಟನೆ ನಡೆದಿದೆ.
ಆಗಸ್ಟ್ 5ರಂದು ಉಂಟಾದ ಮೇಘಸ್ಪೋಟದ ಬಳಿಕ ಹಠಾತ್ ಭೂಕುಸಿತ ಸಂಭವಿಸಿ ತೀವ್ರ ಪ್ರವಾಹದಿಂದ ರಸ್ತೆ ಮುಚ್ಚಿ ಹೋಯಿತು. ಇದರಲ್ಲಿ ಮಹಿಳೆ ಮತ್ತು ಅವರ ಕುಟುಂಬ ಸಿಕ್ಕಿ ಹಾಕಿಕೊಂಡಿತು.
ಉತ್ತರಕಾಶಿಯ ಧರಾಲಿಯಲ್ಲಿ ಪ್ರವಾಹ ಪೀಡಿತ ಪ್ರದೇಶಗಳ ಪರಿಶೀಲನೆ ನಡೆಸುತ್ತಿದ್ದ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರಿಗೆ ಗುಜರಾತ್‌ನ ಪ್ರವಾಸಿಗರಲ್ಲಿ ಒಬ್ಬರಾದ ಅಹಮದಾಬಾದ್‌ನ ಇಸ್ನಾಪುರದ ಧನಗೌರಿ ಬರೋಲಿಯಾ ಎಂಬ ಮಹಿಳೆ ತಮ್ಮ ದುಪಟ್ಟಾದ ಒಂದು ಭಾಗವನ್ನು ಹರಿದು ಅವರ ಕೈಗೆ ರಕ್ಷೆಯಾಗಿ ಕಟ್ಟಿದರು. ರಾಖಿಯನ್ನು ಕಟ್ಟುವಾಗ ಅವರು ಸಿಎಂ ಧಾಮಿ ಅವರ ಪ್ರಯತ್ನಗಳಿಗೆ ಕೃತಜ್ಞತೆ ಸಲ್ಲಿಸಿದರು.
‘ನನಗೆ ನೀವು ಶ್ರೀಕೃಷ್ಣನಂತೆ. ನನ್ನನ್ನು ಮಾತ್ರವಲ್ಲ, ಇಲ್ಲಿರುವ ಎಲ್ಲ ತಾಯಂದಿರು ಮತ್ತು ಸಹೋದರಿಯರನ್ನು ನಿಜವಾದ ಸಹೋದರನಂತೆ ರಕ್ಷಿಸುತ್ತಿದ್ದೀರಿ. ನೀವು ಮೂರು ದಿನಗಳಿಂದ ನಮ್ಮೊಂದಿಗಿದ್ದೀರಿ, ನಮ್ಮ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುತ್ತಿದ್ದೀರಿ ಮತ್ತು ನಮ್ಮ ಅಗತ್ಯಗಳನ್ನು ನೋಡಿಕೊಳ್ಳುತ್ತಿದ್ದೀರಿ’ ಎಂದು ಹೇಳಿದ್ದಾರೆ.
ಧನಗೌರಿ ಬರೋಲಿಯಾ ತಮ್ಮ ಕುಟುಂಬದೊಂದಿಗೆ ಗಂಗೋತ್ರಿಗೆ ತೀರ್ಥಯಾತ್ರೆಗೆ ಬಂದಿದ್ದರು. ಆಗಸ್ಟ್ 5ರಂದು ಉಂಟಾದ ತೀವ್ರ ಮೇಘಸ್ಫೋಟದಿಂದಾಗಿ ಹಠಾತ್ ಭೂಕುಸಿತವಾಗಿ ಅವರು ಮತ್ತು ಕುಟುಂಬ ಬಲವಾದ ಪ್ರವಾಹದಲ್ಲಿ ಸಿಲುಕಿತ್ತು.
ಗಂಗೋತ್ರಿ ಧಾಮ್‌ನಲ್ಲಿ ಸಿಲುಕಿರುವ ಯಾತ್ರಾರ್ಥಿಗಳನ್ನು ನೆಲೋಂಗ್ ಕಣಿವೆಯ ಮೂಲಕ ಸ್ಥಳಾಂತರಿಸಲು ಯೋಜನೆಗಳನ್ನು ರೂಪಿಸಲಾಗುತ್ತಿದೆ. ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ ಮತ್ತು ಅವರನ್ನು ಶೀಘ್ರದಲ್ಲೇ ಸ್ಥಳಾಂತರಿಸಲಾಗುವುದು ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ತಿಳಿಸಿದ್ದಾರೆ.