ನೀನು ವಿಮಾನ ಚಲಾಯಿಸಲು ಯೋಗ್ಯನಲ್ಲ, ಚಪ್ಪಲಿ ಹೊಲಿ: ಇಂಡಿಗೋ ಟ್ರೇನಿ ಪೈಲಟ್‌ಗೆ ಕಿರುಕುಳ

ಹೊಸದಿಗಂತ ಡಿಜಿಟಲ್ ಡೆಸ್ಕ್: 

‘ನೀನು ವಿಮಾನ ಚಲಾಯಿಸಲು ಯೋಗ್ಯನಲ್ಲ’ ‘ಹೋಗಿ ಚಪ್ಪಲಿಗಳನ್ನು ಹೊಲಿ’ ಎಂದು ಹೇಳುವ ಮೂಲಕ ಮೂವರು ಹಿರಿಯ ಅಧಿಕಾರಿಗಳು ತನ್ನನ್ನು ಅವಮಾನಿಸಿದ್ದಾರೆ ಎಂದು ಇಂಡಿಗೋದ ತರಬೇತಿ ನಿರತ ಪೈಲಟ್ ಆರೋಪಿಸಿದ್ದಾರೆ.

ಈ ಘಟನೆ ಗುರಗಾಂವ್‌ನಲ್ಲಿರುವ ಇಂಡಿಗೋ ಕಂಪನಿಯ ಕೇಂದ್ರ ಕಚೇರಿಯಲ್ಲಿ ನಡೆದಿದೆ ಎನ್ನಲಾಗಿದೆ. ಈ ಮೂವರು ಅಧಿಕಾರಿಗಳು ತಮಗೆ ಮೌಖಿಕ ನಿಂದನೆ ಮತ್ತು ತಾರತಮ್ಯ ಆರೋಪ ಮಾಡಿದ್ದಾರೆ. ಎಸ್‌ಸಿ/ಎಸ್‌ಟಿ ಕಾಯ್ದೆ ಮತ್ತು ಬಿಎನ್‌ಎಸ್ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ವರದಿಯ ಪ್ರಕಾರ, ದೂರುದಾರರು ಮೊದಲು ಬೆಂಗಳೂರಿನ ಪೊಲೀಸರನ್ನು ಸಂಪರ್ಕಿಸಿದ್ದಾರೆ. ಅಲ್ಲಿನ ಪೊಲೀಸರು ಶೂನ್ಯ ಎಫ್‌ಐಆರ್ ದಾಖಲಿಸಿದ್ದು, ಈ ಎಫ್‌ಐಆರ್ ಅನ್ನು ಈಗ ಇಂಡಿಗೋ ಪ್ರಧಾನ ಕಚೇರಿ ಇರುವ ಗುರುಗ್ರಾಮಕ್ಕೆ ವರ್ಗಾಯಿಸಲಾಗಿದೆ.

ದೂರುದಾರರು, ಏಪ್ರಿಲ್ 28 ರಂದು ಗುರುಗ್ರಾಮದ ಇಂಡಿಗೋ ಕಚೇರಿಯಲ್ಲಿ ನಡೆದ ಸಭೆಯನ್ನು ಉಲ್ಲೇಖಿಸಿದ್ದಾರೆ. 30 ನಿಮಿಷಗಳ ಕಾಲ ನಡೆದ ಸಭೆಯಲ್ಲಿ, ‘ನೀನು ವಿಮಾನ ಚಲಾಯಿಸಲು ಯೋಗ್ಯನಲ್ಲ, ಹಿಂತಿರುಗಿ ಹೋಗಿ ಚಪ್ಪಲಿ ಹೊಲಿ. ನೀನು ಇಲ್ಲಿ ವಾಚ್‌ಮೆನ್ ಆಗಲು ಸಹ ಅರ್ಹನಲ್ಲ’ ಎಂದು ಹೇಳಲಾಗಿದೆ ಎಂದು ದೂರಿದ್ದಾರೆ.

ನನಗೆ ಕಿರುಕುಳ ನೀಡಿದ್ದು, ನಾನು ರಾಜೀನಾಮೆ ನೀಡುವಂತೆ ಒತ್ತಾಯಿಸುವ ಗುರಿಯನ್ನು ಅವರು ಹೊಂದಿದ್ದಾರೆ. ಈ ರೀತಿಯ ಅವಹೇಳನಕಾರಿ ಹೇಳಿಕೆಗಳು ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಯ ಗುರುತನ್ನು ಕುಗ್ಗಿಸುವ ಗುರಿಯನ್ನು ಹೊಂದಿವೆ ಎಂದು ತರಬೇತಿನಿರತ ಪೈಲಟ್ ಹೇಳಿದ್ದಾರೆ.

ಅನ್ಯಾಯದ ವೇತನ ಕಡಿತ, ಬಲವಂತದ ಮರುತರಬೇತಿ ಸೆಷನ್ಸ್‌ಗಳು ಮತ್ತು ಅನಗತ್ಯ ಎಚ್ಚರಿಕೆ ಪತ್ರಗಳ ಮೂಲಕ ತನ್ನನ್ನು ‘ವೃತ್ತಿಪರ ಬಲಿಪಶು’ವನ್ನಾಗಿ ಮಾಡಲಾಗಿದೆ. ಉನ್ನತ ಅಧಿಕಾರಿಗಳು ಮತ್ತು ಇಂಡಿಗೋದ ನೈತಿಕ ಸಮಿತಿಯೊಂದಿಗೆ ಈ ವಿಷಯವನ್ನು ಪ್ರಸ್ತಾಪಿಸಿದ್ದರೂ, ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಕೊನೆಗೆ ಪೊಲೀಸರಿಗೆ ದೂರು ನೀಡಬೇಕಾಯಿತು ಎಂದು ಅವರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!